ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗೆ ಐಟಿ ಇಲಾಖೆ ಮತ್ತೆ ಶಾಕ್ ನೀಡಿದೆ. ಮಕ್ಕಳು, ಕುಟುಂಬ ಸಹಿತರಾಗಿ ನ.6ರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕೆಂದು ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ.
ಶನಿವಾರ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯಕಾರಿಣಿ ಸಭೆ ಗೆ ಆಗಮಿಸಿದ್ದ ಅಧಿಕಾರಿಗಳು ಈ ನೋಟೀಸ್ ನೀಡಿದ್ದಾರೆ. ಸಹೋದರ ಸಂಸದ ಡಿ.ಕೆ. ಸುರೇಶ್ ಸೇರಿ ಮನೆಯ ಎಲ್ಲಾ ಸದಸ್ಯರೂ ಹಾಜರಾಗಬೇಕೆಂದು ನೋಟಿಸ್‌ನಲ್ಲಿ ಹೇಳಲಾಗಿದ್ದು ಈ ಬಾರಿ ಲೆಕ್ಕಪರಿಶೋಧಕರನ್ನು ಜತೆಯಲ್ಲಿ ಕರೆತರುವಂತಿಲ್ಲ ಎಂದು ಸೂಚಿಸಿದೆ.
ಎರಡು ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ನಿವಾಸ ಹಾಗೂ ಕಛೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು.ಆಗ ಅಪಾರ ಪ್ರಮಾನದ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಇದರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು 6 ಬಾರಿ ಕಛೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದೀಗ ಏಳನೇ ಬಾರಿ ಸಚಿವರು ವಿಚಾರಣೆ ಎದುರಿಸಬೇಕಾಗಿದೆ.
"ನಾನು ನೋಟೀಸಿನಲ್ಲಿ ತಿಳಿಸಿದಂತೆಯೇ ವಿಚಾರಣೆಗೆ ಹಾಜರಾಗುತ್ತೇನೆ. ದೇಶದ ಸಂವಿಧಾನದ ಕುರಿತು ನನಗೆ ಗೌರವವಿದೆ. ತನಿಖೆಗೆ ಸಹಕರಿಸುತ್ತೇನೆ" ಎಂದು ಸಚಿವ ಡಿಕೆ ಶಿವಕುಮಾರ್ ನೋಟೀಸಿನ ಕುರಿತಂತೆ ಪ್ರತಿಕ್ರಯಿಸಿದ್ದಾರೆ.
ಎರಡು ತಿಂಗಳ ಹಿಂದೆ ಗುಜರಾತ್ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಮನೆ, ಕಛೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಇದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.