ಬೆಂಗಳೂರು: ರಾಜ್ಯದ ವಿವಿಧ ರೈಲು ನಿಲ್ದಾಣಗಳಲ್ಲಿ ಕಾಪಾಡಿದ ಶೇಕಡಾ 90ರಷ್ಟು ಮಕ್ಕಳನ್ನು ಅವರ ಹೆತ್ತವರಿಗೆ ಮತ್ತು ಪೋಷಕರಿಗೆ ಹಸ್ತಾಂತರಿಸಲಾಗಿದ್ದು ಇದಕ್ಕೆ ಆಧಾರ್ ಕಾರ್ಡು ಕಾರಣವಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಸುರಕ್ಷಾ ಆಯುಕ್ತೆ ದೇಬಸ್ಮಿತ ಚಟ್ಟೋಪಾಧ್ಯಾಯ ಬ್ಯಾನರ್ಜಿ ತಿಳಿಸಿದ್ದಾರೆ. ಕಳೆದ ಜುಲೈ 1ರಂದು ರಾಜ್ಯದಲ್ಲಿ ಸ್ಥಾಪಿಸಲಾಗಿದ್ದ ನನ್ಹೆ ಫರಿಶ್ಟೆ ಪಡೆಯ ಮುಖ್ಯಸ್ಥರು ಬ್ಯಾನರ್ಜಿಯಾಗಿದ್ದಾರೆ. ಈ ರಕ್ಷಣಾ ಪಡೆ ಮಹಿಳೆಯರು ಮತ್ತು ಮಕ್ಕಳನ್ನು ಮಾನವ ಕಳ್ಳ ಸಾಗಣೆದಾರರಿಂದ ರಕ್ಷಿಸುತ್ತದೆ.
ವಿಶೇಷ ರಕ್ಷಣಾ ಪಡೆಗೆ 100 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬ್ಯಾನರ್ಜಿ, ರಕ್ಷಿಸಲಾದ 505 ಮಕ್ಕಳು ಮತ್ತು ಮಹಿಳೆಯರಲ್ಲಿ 438 ಮಂದಿ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ ಎಂದರು.
ಕಾಪಾಡಲ್ಪಟ್ಟ ಮಕ್ಕಳನ್ನು ಮತ್ತು ಮಹಿಳೆಯರನ್ನು ಅವರ ಕುಟುಂಬದವರಿಗೇ ಹಸ್ತಾಂತರಿಸುತ್ತೇವೆ. ಕೆಲವು ಮಕ್ಕಳು ತೀರಾ ಚಿಕ್ಕವರಾಗಿರುತ್ತಾರೆ, ಮಾತನಾಡಲು ಸರಿಯಾಗಿ ಬರುವುದಿಲ್ಲ. ಹೀಗಾಗಿ ಕಾಪಾಡಲ್ಪಟ್ಟ ಮಕ್ಕಳನ್ನು ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತೇವೆ. ಅವರ ಬೆರಳಚ್ಚು ತೆಗೆದು ನೋಡುತ್ತೇವೆ. ಆಧಾರ್ ಕಾರ್ಡು ಮೂಲಕ ಅವರ ಕುಟುಂಬದವರು ಮತ್ತು ಮನೆ ವಿಳಾಸವನ್ನು ಸುಲಭವಾಗಿ ಪತ್ತೆಹಚ್ಚುತ್ತೇವೆ ಎಂದು ವಿವರಿಸಿದರು.
ಜನರು ತಾವಾಗಿಯೇ ಬಂದು ಮಕ್ಕಳು ತಮ್ಮವರು ಎಂದು ಹೇಳಿ ದಾಖಲೆಗಳನ್ನು ತೋರಿಸಿದರೆ ಮಕ್ಕಳನ್ನು ಅವರಿಗೆ ಹಸ್ತಾಂತರಿಸುತ್ತೇವೆ ಎಂದು ಆಯುಕ್ತೆ ತಿಳಿಸಿದರು. ಇದುವರೆಗೆ ದಾಖಲೆ ಹೊಂದಿಕೆಯಾಗದ ಒಂದೇ ಒಂದು ಕೇಸು ಸಿಕ್ಕಿದೆಯಷ್ಟೆ. ಆ ಮಗುವನ್ನು ಮಕ್ಕಳ ಅಭಿವೃದ್ಧಿ ಸಮಿತಿಗೆ ಕಳುಹಿಸಿದ್ದೇವೆ ಎಂದರು.
ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಮಕ್ಕಳು ಕಂಡುಬಂದರೆ 182 ಸಂಖ್ಯೆಗೆ ಯಾವುದೇ ಸಮಯದಲ್ಲಾದರೂ ಕರೆಮಾಡಿ ರೈಲ್ವೆ ರಕ್ಷಣಾ ಪಡೆಗೆ ತಿಳಿಸಬಹುದು. ಮಕ್ಕಳ ಕಳ್ಳಸಾಗಣೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಅಂಗಾಂಗಗಳನ್ನು ಕದ್ದು ಮಾರಾಟ ಮಾಡಲು ಮಕ್ಕಳನ್ನು ಕದಿಯಲಾಗುತ್ತದೆ. ಅಪಹರಿಸಿದ ಮಕ್ಕಳನ್ನು ಮತ್ತು ಮಹಿಳೆಯರನ್ನು ವೇಶ್ಯಾವಾಟಿಕೆಗೆ ಮತ್ತು ಕೂಲಿ ಕೆಲಸಗಳಿಗೆ ದೂಡಲಾಗುತ್ತದೆ ಎಂದು ದೇಬಸ್ಮಿತ ಚಟ್ಟೋಪಾಧ್ಯಾಯ ಬ್ಯಾನರ್ಜಿ ವಿವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos