ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಿರುವ ಕೆಪಿಎಂಇ ಮಸೂದೆಗೆ ವೈದ್ಯರಿಂದ ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ವಿಧೇಯಕ ಮಂಡನೆ, ಜಾರಿ ಕುರಿತ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ರಾಜ್ಯ ಸಚಿವ ಸಂಪುಟ ಅಧಿಕಾರ ನೀಡಿದೆ.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆದು, ಮುಂದಿನ ಸೋಮವಾರದಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೂ, ಅದರಲ್ಲಿನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಅಂತಿಮವಾಗಿ ಮತ್ತೊಂದು ಬಾರಿ ಪರಾಮರ್ಶಿಸಿ, ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಅಧಿಕಾರ ನೀಡಿದೆ.
ರಾಜ್ಯದ ಪ್ರಖ್ಯಾತ ವೈದ್ಯರಿರುವ ಭಾರತೀಯ ವೈದ್ಯ ಸಂಘವು ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ನ.13 ರಂದು ಬೆಳಗಾವಿ ಚಲೋ ಆಯೋಜಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಯ್ದೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ಸಣ್ಣ ಬದಲಾವಣೆಯನ್ನು ಸರ್ಕಾರ ಮಾಡಿಕೊಂಡಿದ್ದು, ಅಂತಿನ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ಬಿಡುವ ಮೂಲಕ ಇನ್ನೂ ಸಂಧಾನದ ಮಾರ್ಗವನ್ನು ತೆರೆದಿಟ್ಟಿದೆ.
ವಿಧೇಯಕದ ಅಂತಿಮ ತೀರ್ಮಾನವನ್ನು ಸಚಿವ ಸಂಪುಚ ಮುಖ್ಯಮಂತ್ರಿಗಳಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ತಪ್ಪು ಮಾಡುವ ಖಾಸಗಿ ವೈದ್ಯಕೀಯ ಸಂಸ್ಥಗಳು ಹಾಗೂ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಂಡು 2 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವುದು, ರೂ.5 ಲಕ್ಷದವರೆಗೂ ದಂಡ ವಿಧಿಸುವುದು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೂರು ನಿವಾರಣಾ ಸಮಿತಿಗಳ ರಚನೆ ಮಾಡುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ವಿದೇಶಿ ಮರಳು ಆಮದಿಗೆ ಸಂಚಿವ ಸಂಪುಟ ಅಸ್ತು
ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವುದು, ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಮರಳು ಗಣಿಗಾರಿಕೆ ಟಾಸ್ಕ್ ಫೋರ್ಸ್ ಗಳನ್ನು ವಿಸರ್ಜಿಸಿ ಗಣಿ ಹಂಚಿಕೆ ಸೇರಿದಂತೆ ಎಲ್ಲಾ ಅಧಿಕಾರಗಳನ್ನು ಗಣಿ ನಿರ್ದೇಶಕರಿಗೆ ನೀಡಲು ಕರ್ನಾಟಕ ಖನಿಜ ನೀತಿಗೆ ಮಹತ್ವದ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಗುರುವಾಗ ಒಪ್ಪಿಗೆನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.
ರಾಜ್ಯಲ್ಲಿ ಮರಳು ಗಣಿಗಾರಿಗೆ ನಡೆಸಲು ಅನುಮತಿ ಕೋರಿ ವಿವಿಧ ಜಿಲ್ಲೆಗಳಲ್ಲಿ 2000 ಅರ್ಜಿಗಳು ಡಿಸಿಗಳ ಅಧ್ಯಕ್ಷತೆಯಲ್ಲಿದ್ದ ಟಾಸ್ಕ್ ಫೋರ್ಸ್ ಗಳಲ್ಲಿ ಬಾಕಿ ಇದ್ದವು. ಡಿಸಿಗಳ ಮಟ್ಟದಲ್ಲಿ ಮರಳು ಗಣಿಗಾರಿಕೆ ಅನುಮತಿ ನೀಡುವುದು ವಿಳಂಬವಾಗುತ್ತಿದೆ. ಎಂಬುದಾಗಿ ವ್ಯಾಪಕ ದೂರುಗಳಿದ್ದವು. ಹೀಗಾಗಿ ಇನ್ನು ಮುಂದೆ ನೇರವಾಗಿ ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರಿಗೆ ಪರ್ಮಿಟ್ ನೀಡುವ ಅಧಿಕಾರ ನೀಡಲು ಕೂಡ ನೀತಿಗೆ ತಿದ್ದುಪಡಿ ತರಲಾಗಿದೆ.
ಇದರಿಂದ ಬೇಡಿಕೆಗೆ ತಕ್ಕಂತೆ ಮರಳು ಪೂರೈಕೆಯಾಗುವ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಇಲ್ಲದಿದ್ದರೆ ವಿನಾಕಾರಣ ಮರುಳುಗಾರಿಕೆ ಸ್ಥಗಿತಗೊಂಡು ಮರಳಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇತ್ತು. ಇನ್ನು ಮುಂದೆ ಅಗತ್ಯ ಪ್ರಮಾಣದ ಮರಳು ಪೂರೈಕೆಯಿಂದ ದರದಲ್ಲಿ ಕೂಡ ಸಾಕಷ್ಟು ನಿಯಂತ್ರಣ ಸಾಧ್ಯವಾಗಲಿದೆ. ಇದೇ ಉದ್ದೇಶಕ್ಕೆ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.