ಬೆಂಗಳೂರು: ಇನ್ನು ಎರಡು ಮೂರು ತಿಂಗಳಲ್ಲಿ ಐತಿಹಾಸಿಕ ಹಂಪಿಯ ವೈಭವವನ್ನು ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಕ್ಕೆಲಗಳಲ್ಲಿ ಹಂಪಿಯನ್ನು ಪುನರ್ ರಚಿಸಲಾಗುತ್ತದೆ. ದೀಪಾಂಜಲಿನಗರ ಬಸ್ ಡಿಪೊದಿಂದ ಮಾಗಡಿ ರಸ್ತೆಯ ಟೋಲ್ ಗೇಟ್ ವರೆಗೆ ಸುಮಾರು 4.5 ಕಿಲೋ ಮೀಟರ್ ಉದ್ದಕ್ಕೆ ಹಂಪಿಯ ಚಿತ್ರಣವನ್ನು ರಚಿಸಲಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಹಂಪಿಯ ತದ್ರೂಪಿ ಸ್ಮಾರಕಗಳನ್ನು 25 ಕಡೆಗಳಲ್ಲಿ ನಿರ್ಮಿಸಲಾಗುತ್ತದೆ.
ವಿಜಯನಗರ ವೈಭೋಗ ಎಂದು ಯೋಜನೆಗೆ ಹೆಸರಿಡಲಾಗಿದ್ದು, ಸರ್ಕಾರ 65 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಲ್ಲಿ ಹಂಪಿಯ ಕಲ್ಲಿನ ರಥ, ತಾವರೆ ಅರಮನೆ, ಹವಾ ಮಹಲ್, ವಿಜಯ ವಿಠಲ ದೇವಸ್ಥಾನ, ಕಲ್ಯಾಣಿ ಮತ್ತು ಪುಷ್ಕರಣಿ, ಸಾಸಿವೆಕಾಳು ಗಣಪತಿ, ಕಡಲೆಕಾಳು ಗಣಪತಿ ಮತ್ತು ಇನ್ನೂ ಹಲವಿನ ತದ್ರೂಪಿ ಸ್ಮಾರಕಗಳನ್ನು ನಿರ್ಮಿಸಲಾಗುತ್ತದೆ.
ಉದ್ಯಾನವನಗಳಿಗೆ ಎರಡೂ ಬದಿಗಳಲ್ಲಿ ಬೇಲಿ ನಿರ್ಮಿಸಲಾಗುತ್ತಿದ್ದು ಹಂಪಿಯಲ್ಲಿರುವಂತೆ ಕಲ್ಲಿನ ಆಧಾರ ಕಂಬಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಹೊರತಾಗಿ ರಸ್ತೆಯ ಮಧ್ಯದಲ್ಲಿ 200 ಮೆಟ್ರೊ ಕಂಬಗಳನ್ನು ನಿರ್ಮಿಸಲಾಗುತ್ತದೆ. ಹಂಪಿಯಲ್ಲಿರುವ ಶಿಲ್ಪಗಳಂತೆಯೇ ಈ ಕಲ್ಲಿನ ಕಂಬಗಳಲ್ಲಿ ಚಿತ್ರ ರಚಿಸಲಾಗುತ್ತದೆ. ಇದರ ಮಧ್ಯದಲ್ಲಿ ಕೆಲವು ಆಕರ್ಷಣೆಯನ್ನು ಕೂಡ ನಿರ್ಮಿಸಲಾಗುತ್ತದೆ. ಹಂಪಿಯ ಕೆರೆಯನ್ನು ಕೂಡ ಸಣ್ಣ ಗಾತ್ರದಲ್ಲಿ ನಿರ್ಮಿಸಲಾಗುತ್ತದೆ. ಚಿತ್ರಕಲೆಗೆ, ಕಲ್ಲಿನ ಕೆತ್ತನೆಗೆ ಚಿತ್ರಕಲಾ ಪರಿಷತ್ತಿನ ಸಹಾಯ ಪಡೆಯುತ್ತೇವೆ. ಕೆಲವು ಕಲ್ಲನ್ನು ಕೆತ್ತಿ ಬೇರೆಡೆಯಿಂದ ತರಲಾಗುತ್ತಿದ್ದು ಇನ್ನು ಕೆಲವು ತಯಾರಿ ಮಾಡಿದ್ದನ್ನು ಖರೀದಿಸುತ್ತೇವೆ ಎಂದು ಮೂಲಗಳು ತಿಳಿಸುತ್ತವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ನಿಗಮದ ಸಹಾಯದಿಂದ ತದ್ರೂಪಿ ಹಂಪಿಯನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತದೆ.
ಹಂಪಿಯ ವೈಭೋಗವನ್ನು ಇನ್ನು ಎರಡು-ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾಣಬಹುದು ಎನ್ನುತ್ತಾರೆ ವಿಜಯನಗರ ಕ್ಷೇತ್ರದ ಶಾಸಕರಾದ ವಸತಿ ಖಾತೆ ಸಚಿವ ಎಂ. ಕೃಷ್ಣಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics