ರಾಜ್ಯ

ನ.20ರಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿರುವ 12 ವರ್ಷ ಬಾಲ ಕಾರ್ಮಿಕಳಾಗಿ ದುಡಿದ ಕನಕಾ!

Sumana Upadhyaya
ಬೆಂಗಳೂರು: ಬಾಲ ಕಾರ್ಮಿಕಳಾಗಿ 12 ವರ್ಷಗಳನ್ನು ಕಳೆದ ಕನಕ ವಿ ಎಂಬ ಬಾಲಕಿ ಮಕ್ಕಳ ಹಕ್ಕುಗಳ ಬಗ್ಗೆ ಇದೇ 20ರಂದು ಸಂಸತ್ತಿನಲ್ಲಿ ಸಾರ್ವತ್ರಿಕ ಮಕ್ಕಳ ಹಕ್ಕು ದಿನಾಚರಣೆಯಲ್ಲಿ ಮಾತನಾಡಲಿದ್ದಾಳೆ.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ(ಯುನಿಸೆಫ್) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡಲು ಆಯ್ಕೆಯಾದ ದೇಶದಾದ್ಯಂತ 30 ಮಕ್ಕಳ ಪೈಕಿ ಕರ್ನಾಟಕದಿಂದ ಕನಕಾ ಒಬ್ಬಳಾಗಿದ್ದಾಳೆ. ಇದೇ ಮೊದಲ ಬಾರಿಗೆ  ಮಕ್ಕಳು ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. 
ಬೆಂಗಳೂರಿನ ಕೊಳಚೆ ಪ್ರದೇಶದಲ್ಲಿ ಹುಟ್ಟಿದ ಕನಕಳ ತಾಯಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕನಕಾಳ ತಂದೆ ವಿಕಲಾಂಗ. ಹೀಗಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಾಲ್ಕನೆ ತರಗತಿಯವರೆಗೆ ಮಾತ್ರ ಕನಕ ಶಾಲೆಗೆ ಹೋಗಿದ್ದು. ನಂತರ ಅವಳ ತಾಯಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು. ಹೀಗಾಗಿ ಕನಕಾ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಜೀವನ ಸಾಗಿಸಲು ಮನೆಕೆಲಸ ಮಾಡತೊಡಗಿದಳು. ಕೆಲ ತಿಂಗಳುಗಳು ಕಳೆದ ನಂತರ ಕನಕಾಳ ತಾಯಿ ತೀರಿಕೊಂಡರು. ಕನಕಾ ಅನಿವಾರ್ಯವಾಗಿ ತನ್ನ ಸಂಬಂಧಿಕರ ಮನೆಯಲ್ಲಿ ಇರಬೇಕಾಯಿತು. ಅಲ್ಲಿ ಅವಳನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಲಾರಂಭಿಸಿದರು.
ಹೆಚ್ಚಿನ ದುಡಿಮೆಗೆಂದು ಕನಕಾಳನ್ನು ಅವಳ ಸಂಬಂಧಿಕರು ಮದುವೆ ಸಮಾರಂಭಗಳಲ್ಲಿ ಕೆಲಸ ಮಾಡಲು ಕಳುಹಿಸುತ್ತಿದ್ದರು. ಯಶವಂತಪುರದ ಮದುವೆ ಸಮಾರಂಭದಲ್ಲಿ ಕನಕ ಒಂದು ದಿನ ಕೆಲಸ ಮಾಡುತ್ತಿರುವಾಗ ಸ್ಪರ್ಶ ಎಂಬ ಸರ್ಕಾರೇತರ ಸಂಘಟನೆಗೆ ಸಿಕ್ಕಿ ಕನಕಾಳನ್ನು ದುಡಿಮೆಯಿಂದ ಕಾಪಾಡಿತು. ಕನಕಳನ್ನು ಸಂಘಟನೆ ರಕ್ಷಿಸಿದ್ದು 2011ರಲ್ಲಿ. 
ಇಂದು ಕನಕಾ ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಾಳೆ. 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 80ರಷ್ಟು ಅಂಕ ಗಳಿಸಿರುವ ಕನಕಾ ವಿಜ್ಞಾನಿಯಾಗುವ ಆಸೆ ಹೊಂದಿದ್ದಾಳೆ. ಇದೀಗ ಕನಕಾ ಕರ್ನಾಟಕದಿಂದ ಪ್ರತಿನಿಧಿಸುತ್ತಿದ್ದು 8 ನಿಮಿಷ ಸಂಸತ್ತಿನಲ್ಲಿ ಮಾತನಾಡಲಿದ್ದಾಳೆ. ರಾಜ್ಯದಿಂದ ನೂರಕ್ಕೂ ಹೆಚ್ಚು ಮಕ್ಕಳು ಆಡಿಷನ್ ನಲ್ಲಿ ಪಾಲ್ಗೊಂಡಿದ್ದು ಅವರಲ್ಲಿ ಕನಕಾ ಆಯ್ಕೆಯಾಗಿದ್ದಾಳೆ.
ಇದು ನನ್ನ ಜೀವನದಲ್ಲಿ ಒಂದು ಸುಂದರ ಕ್ಷಣ. ಮಕ್ಕಳ ಹಕ್ಕುಗಳ ರಕ್ಷಣೆಗೆ ಅನೇಕ ಕಾನೂನುಗಳಿದ್ದರೂ ಕೂಡ ಅವೆಲ್ಲವೂ ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ. ಇದರ ಬಗ್ಗೆ ನಾನು ಸಂಸತ್ತಿನಲ್ಲಿ ಮಾಡುವ ಭಾಷಣದಲ್ಲಿ ಒತ್ತಿ ಹೇಳುತ್ತೇನೆ ಎನ್ನುತ್ತಾಳೆ ಕನಕಾ. 
SCROLL FOR NEXT