ಬೆಂಗಳೂರು: ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟೇಶ್ವರನ 89ನೇ ಮಹಾಮಸ್ತಕಾಭಿಷೇಖ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಮಹೋತ್ಸವಕ್ಕೆ ಸಮರೋಪಾದಿಯಲ್ಲಿ ಸಿದ್ಧತೆಗಳು ಸಾಗಿವೆ.
ಪ್ರತೀ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ ವೇಳೆ ಲಕ್ಷಾಂತರ ಭಕ್ತರು ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದರೂ 10-12 ಸಾವಿರ ಜನರಷ್ಟೇ ವಿಂಧ್ಯಗಿರಿ ಏರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಹಾಮಸ್ತಕಾಭಿಷೇಕವನ್ನು ನೋಡಬಹುದಾಗಿತ್ತು. ಆದರೆ ಈ ಬಾರಿ ಜನತೆ ಮನೆಯಲ್ಲಿಯೇ ಕುಳಿತು ವರ್ಚ್ಯುವಲ್ ರಿಯಾಲಿಟಿ ಸಾಧನಗಳ (ಕನ್ನಡಕ) ಮೂಲಕ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ವಿಂಧ್ಯಗಿರಿ ಬೆಟ್ಟದಲ್ಲಿ 58 ಅಡಿ ಎತ್ತರದ ಗೊಮ್ಮಟೇಶ್ವರ ಏಕಶಿಲಾಮೂರ್ತಿಯ 360 ಡಿಗ್ರಿ ದೃಶ್ಯಾವಳಿ ವರ್ಚ್ಯುವಲ್ ರಿಯಾಲಿಟಿ ಮಾದರಿಯಲ್ಲಿ ನೇರಪ್ರಸಾರವಾಗಲಿದ್ದು, ಬಾಹುಬಲಿ ಮುಡಿಯಿಂದ ಅಡಿವರೆಗೂ ವಿವಿಧ ದ್ರವ್ಯಗಳಲ್ಲಿ ಪವಿತ್ರ ಸ್ನಾನವನ್ನು ಎದುರಿನಲ್ಲೇ ನಿಂತು ನೋಡುವ ಅನುಭವ ವೀಕ್ಷಕರಿಗೆ ಸಿಗಲಿದೆ.
ಮಹಾಮಸ್ತಕಾಭಿಷೇಕವನ್ನು ನೋಡಲು ಇಚ್ಛಿಸುವ ಜನರು ಮಹಾಮಜ್ಜನದ ವೇಳೆ ಜಿಲ್ಲಾಡಳಿತ ನೀಡುವ ಬಾರ್ ಕೋಡ್ ಅನ್ನು ಸ್ಮಾರ್ಟ್ ಫೋನ್ ಗಳಲ್ಲಿ ಸ್ಕ್ಯಾನ್ ಮಾಡಬೇಕು. ನಂತರ ವರ್ಚ್ಯುವಲ್ ರಿಯಾಲಿಟಿ ಸಾಧನ (ಕನ್ನಡಕ)ದ ಮೂಲಕ ನೇರ ಪ್ರಸಾರವನ್ನು ವೀಕ್ಷಿಬಹುದಾಗಿದೆ.
10 ಕನ್ನಡಕಗಳನ್ನು ನೀಡಲು ಜಿಲ್ಲಾಡಳಿತ ಮಂಡಳಿ ನಿರ್ಧರಿಸಿದ್ದು, ಈ ಬಗ್ಗೆ ಖಾಸಗಿ ಸಂಸ್ಥೆಗಳೊಂದಿಗೆ ಮಾತುರತೆ ನಡೆಸಿವೆ ಎಂದು ತಿಳಿದುಬಂದಿದೆ,
ಈ ಬಗ್ಗೆ ಹಲವು ಕಂಪನಿಗಳು ವಿಆರ್ ನೇರಪ್ರಸಾರದ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿ ತೋರಿವೆ. ವಿಆರ್ ನೇರ ಪ್ರಸಾರಕ್ಕಾಗಿ ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ವಿದ್ಯಾಗಿರಿಯ ಮೇಲೆ ಅಂತರ್ಜಾಲ ಸೇವೆ ಉತ್ತಮಗೊಳಿಸಲು ಕೋರಲಾಗಿದೆ. ವೇಗದ ಇಂಟರ್ ನೆಟ್ ನಿಂದ ನೇರಪ್ರಸಾರದ ದೃಶ್ಯಗಳು ಯಾವುದೇ ಅಡೆತಡೆಯಿಲ್ಲದೆ ವಿಆರ್ ಕನ್ನಡಕ ಧರಿಸಿದವರನ್ನು ಕ್ಷಣಮಾತ್ರದಲ್ಲಿ ತಲುಪಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಭಾಗವಹಿಸುವ ನಿರೀಕ್ಷೆಯಿದ್ದು, ಮಹೋತ್ಸವದ ಸಮಾರೋಪದ ವೇಳೆಗೆ ಭಕ್ತಾದಿಗಳ ಸಂಖ್ಯೆ 1 ಕೋಟಿ ದಾಟುವ ಸಾಧ್ಯತೆಗಳಿವೆ. ಬಾಹುಬಲಿ ಮೂರ್ತಿಯ ಹಿಂಬಾಗದಲ್ಲಿ ಭಕ್ತರು ಅಭಿಷೇಕ ಮಾಡಲು ಅನುಕೂಲವಾಗುವಂತೆ ಅಟ್ಟಣಿಗೆ ನಿರ್ಮಿಸಲಾಗುತ್ತಿದೆ. ಮೂರ್ತಿಯ ಎದುರು ಭಾಗದಲ್ಲಿ ಸುಮಾರು 5000 ಮಂದಿ ಕುಳಿತು ಅಭಿಷೇಕ ವೀಕ್ಷಿಸಲು ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜರ್ಮನ್ ತಂತ್ರಜ್ಞಾನ ಬಳಸಿ ರಿಂಗ್ ಅ್ಯಂಡ್ ಲಾಕ್ ಮಾದರಿಯ ಹೈಟೆಕ್ ಅಟ್ಟಣಿಗೆ ಹಾಗೂ ವೀಕ್ಷಣಾ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos