ರಾಜ್ಯ

ಖಾಸಗಿ ವೈದ್ಯರ ಮುಷ್ಕರ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

Lingaraj Badiger
ಬೆಳಗಾವಿ: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಗುರುವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಸರ್ಕಾರ ಮತ್ತು ಮುಷ್ಕರ ನಿರತ ವೈದ್ಯರ ನಡುವಿನ ಮಾತುಕತೆ ವಿಫಲವಾಗಿದ್ದು, ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಮುಷ್ಕರದಿಂದಾಗಿ ರಾಜ್ಯಾದ್ಯಂತ ಚಿಕಿತ್ಸೆ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದು, ರಾಜ್ಯ ಸರ್ಕಾರ ಸೂಕ್ಷ್ಮತೆ ಇಲ್ಲ ಎಂದು ಆರೋಪಿಸಿದರು.
ವೈದ್ಯರ ಮುಷ್ಕರವನ್ನು ಎದುರಿಸಲು ರಾಜ್ಯ ಸರ್ಕಾರ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ? ಎಂದು ಪ್ರಶ್ನಿಸಿದ ಶೆಟ್ಟರ್, ಕೆಪಿಎಂಇ ಕಾಯ್ದೆಯನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಈ ಕೂಡಲೇ ವೈದ್ಯರ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, ಸರ್ಕಾರ ಯಾವುದೇ ಕಾಯ್ದೆ ಜಾರಿಗೆ ತರಬೇಕಾದರೆ ಒಂದಷ್ಟು ವಿರೋಧ ಇದ್ದೆ ಇರುತ್ತದೆ ಮತ್ತು ಅದನ್ನು ಮಾತುಕತೆ ಮೂಲಕ ಪರಿಹರಿಸಲು ಸರ್ಕಾರ ಸಿದ್ಧವಾಗಿದೆ ಎಂದರು. ಅಲ್ಲದೆ ವೈದ್ಯರ ಮುಷ್ಕರ ನ್ಯಾಯಸಮ್ಮತವೇ? ಎಂದು ಪ್ರಶ್ನಿಸಿದ ಸಚಿವರು, ಸರ್ಕಾರ ವೈದ್ಯರ ಸಮಸ್ಯೆ ಆಲಿಸಲು ಮುಕ್ತವಾಗಿದೆ ಎಂದರು.
SCROLL FOR NEXT