ರಾಜ್ಯ

ಹೈಕೋರ್ಟ್ ಮಾತಿಗೆ ಮನ್ನಣೆ: ಖಾಸಗಿ ವೈದ್ಯರ ಮುಷ್ಕರ ಅಂತ್ಯ, ನಾಳೆಯಿಂದ ಎಂದಿನಂತೆ ಒಪಿಡಿ ಕಾರ್ಯಾರಂಭ

Lingaraj Badiger
ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿದ್ದ ವೈದ್ಯರ ಒಕ್ಕೂಟ ಗುರುವಾರ ಹೈಕೋರ್ಟ್ ಮನವಿಗೆ ಸ್ಪಂದಿಸಿ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿದೆ. 
ಪ್ರತಿಭಟನೆ ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಫ‌ನಾ ಅಧ್ಯಕ್ಷ ಜಯಣ್ಣ ರಾಜ್ಯವ್ಯಾಪಿ ರೋಗಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಪರಿಗಣಸಿ ಮುಷ್ಕರವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ. 
ಹೈಕೋರ್ಟ್ ಮನವಿಯನ್ನು ವೈದ್ಯರ ಒಕ್ಕೂಟ ಗೌರವಿಸಿದ್ದು, ಅದೇ ಕಾರಣಕ್ಕೆ ನಾವು ಮುಷ್ಕರ ಹಿಂಪಡೆಯುತ್ತಿದ್ದೇವೆ ಎಂದು ಜಯಣ್ಣ ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕೆಪಿಎಂಇ ಕಾಯ್ದೆ ಕುರಿತು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಸಂಘದ ಕಾರ್ಯದರ್ಶಿ ಡಾ.ರವೀಂದ್ರ ಹೇಳಿದ್ದಾರೆ.
ಖಾಸಗಿ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್. ಜಿ ರಮೇಶ್ ಹಾಗೂ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಜನಸಾಮಾನ್ಯರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಮುಷ್ಕರ ಮುಂದುವರಿಸಬೇಡಿ, ಖಾಸಗಿ ವೈದ್ಯರು ತಕ್ಷಣವೇ ಮುಷ್ಕರ ನಿಲ್ಲಿಸಬೇಕೆಂದು ಸೂಚನೆ ನೀಡಿತ್ತು. ಅಲ್ಲದೆ ನಾಳೆ ಸಮಸ್ಯೆ ಇತ್ಯರ್ಥಪಡಿಸಿ ವೈದ್ಯಕೀಯ ಸೇವ ಸಹಜ ಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
SCROLL FOR NEXT