ರಾಜ್ಯ

300 ಕೋಟಿ ರು. ಲ್ಯಾಪ್ ಟಾಪ್ ಹಗರಣ: ತನಿಖೆಗೆ ಸದನ ಸಮಿತಿ ರಚನೆ

Lingaraj Badiger
ಬೆಳಗಾವಿ: ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಲ್ಯಾಪ್ಟಾಪ್ ವಿತರಿಸುವ ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ 300 ಕೋಟಿ ರು.ಗಳ ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆಗೆ ಸದನ ಸಮಿತಿ ರಚಿಸಲು ಶುಕ್ರವಾರ ವಿಧಾನ ಪರಿಷತ್ ನಿರ್ಧರಿಸಿದೆ.
ಈ ಸದನ ಸಮಿತಿ 300 ಕೋಟಿ ರುಪಾಯಿ ಉಚಿತ ಲ್ಯಾಪ್ ಟಾಪ್ ಹಗರಣದ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಹೇಳಿದ್ದಾರೆ.
ಹಗರಣ ಸಂಬಂಧ ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಈ ಕುರಿತು ತನಿಖೆಗೆ ಆಗ್ರಹಿಸಿದರು.
2017-18 ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದಿರುವ ಎಲ್ಲ ಜಾತಿ-ಧರ್ಮಗಳ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಕಟಿಸಿದ್ದರು. ಈ ಘೋಷಣೆ ಅನ್ವಯ ಉನ್ನತ ಶಿಕ್ಷಣ ಇಲಾಖೆ ಲ್ಯಾಪ್ಟಾಪ್ ಹಂಚಿಕೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. 
2016 - 17 ನೇ ಸಾಲಿನಲ್ಲಿ ಕೇವಲ 37 ಸಾವಿರ ದಲಿತ ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಲ್ಯಾಪ್ ' ಟಾಪ್ ಯೋಜನೆಯ ಮುಂದುವರಿದ ಯೋಜನೆ ಇದಾಗಿದ್ದು , ಕಳೆದ ವರ್ಷದ ಮಾದರಿಯಲ್ಲೇ ಲ್ಯಾಪ್ಟಾಪ್ ಖರೀದಿಸಬೇಕಿತ್ತು. ಆದರೆ ಏಕಾಏಕಿ ಪ್ರತಿ ಲ್ಯಾಪ್ಟಾಪ್ ದರವನ್ನು ಹಿಂದಿನ ದರಕ್ಕಿಂತ 10 ಸಾವಿರ ರು. ಗಳಷ್ಟು ಹೆಚ್ಚಳ ಮಾಡಿದ್ದಲ್ಲದೇ ಒಂದೂವರೆ ಲಕ್ಷ ಲ್ಯಾಪ್ಟಾಪ್ ಖರೀದಿಯನ್ನು ನಾಲ್ಕು ಭಾಗಗಳಾಗಿ ತುಂಡು ಗುತ್ತಿಗೆ ಮೂಲಕ ಖರೀದಿಸಲು ಉನ್ನತ ಶಿಕ್ಷಣ ಇಲಾಖೆ ಕಡತ ಮಂಡಿಸಿತು. ಆಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಡಾ.ಎಂ.ಎನ್.ಅಜಯ್ ನಾಗಭೂಷಣ್ , ' ಈ ಪ್ರಕ್ರಿಯೆ ಸರಿಯಿಲ್ಲ. ಹೀಗಾಗಿ ಇಡೀ ಟೆಂಡರ್ ಪ್ರಕ್ರಿಯೆ ತಡೆಯಿರಿ ' ಎಂದು ಸರ್ಕಾರಕ್ಕೆ ಪತ್ರ ಬರೆದರು. ಆದರೂ ಟೆಂಡರ್ ಪ್ರಕ್ರಿಯೆಗೆ ಸರ್ಕಾರ ತಡೆ ನೀಡದ ಕಾರಣ , ಆಯುಕ್ತ ಅಜಯ್ ನಾಗಭೂಷಣ್ ಕಡತಕ್ಕೆ ಸಹಿ ಹಾಕಲಿಲ್ಲ. ಇದರ ಬೆನ್ನಲ್ಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಹುದ್ದೆಯಿಂದ ಡಾ. ಅಜಯ್ ಅವರನ್ನು ಎತ್ತಂಗಡಿ ಮಾಡಲಾಯಿತು. ಹೀಗಾಗಿ ಮನನೊಂದ ಡಾ.ಅಜಯ್ ನಾಗಭೂಷಣ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಲ್ಯಾಪ್ಟಾಪ್ ಹಗರಣ ಸೇರಿದಂತೆ ಹಲವು ಅಕ್ರಮಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರಿಗೆ ದಾಖಲೆಗಳ ಸಹಿತ ಸುದೀರ್ಘ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
SCROLL FOR NEXT