ಬೆಂಗಳೂರು: ಪದ್ಮಾವತಿ ಚಿತ್ರದ ವಿವಾದದ ಹಿನ್ನಲೆಯಲ್ಲಿ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಕುಟುಂಬಕ್ಕೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ಒದಗಿಸಿದೆ.
ಮೂಲಗಳ ಪ್ರಕಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆ ಮೇರೆಗೆ ದೀಪಿಕಾ ಕುಟುಂಬದವರು ವಾಸವಿರುವ ಬೆಂಗಳೂರಿನ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿರುವ ‘ವುಡ್ಸ್ ವೇಲ್’ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ. ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರ ಶಿರಚ್ಛೇದ ಮಾಡಿದವರಿಗೆ ರೂ.10 ಕೋಟಿ ಬಹುಮಾನ ನೀಡುವುದಾಗಿ ಹರ್ಯಾಣದ ಬಿಜೆಪಿ ಮುಖಂಡರೊಬ್ಬರು ಘೋಷಿಸಿದ ಬೆನ್ನಲ್ಲೇ, ಬೆಂಗಳೂರಿನಲ್ಲಿ ನೆಲೆಸಿರುವ ದೀಪಿಕಾ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಿನ್ನೆಯಷ್ಟೇ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ನಟಿ ದೀಪಿಕಾ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಟ್ವಿಟರ್ ನಲ್ಲಿ ಮನವಿ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ದೀಪಿಕಾ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜೆ.ಸಿ.ನಗರ ಠಾಣೆಯ ಪೊಲೀಸರು, "ದೀಪಿಕಾ ತಂದೆ ಹಾಗೂ ಹಿರಿಯ ಬ್ಯಾಡ್ಮಿಂಟನ್ ಆಟಗಾರರಾಗಿರುವ ಪ್ರಕಾಶ್ ಪಡುಕೋಣೆ, ತಾಯಿ ಉಜ್ಜಲಾ ಮತ್ತು ಸಹೋದರಿ ಆನಿಶಾ ಅವರು ಹಲವು ವರ್ಷಗಳಿಂದ 'ವುಡ್ಸ್ ವೇಲ್'’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಿದ್ದಾರೆ. ಕಮಿಷನರ್ ಅವರ ಸೂಚನೆಯಂತೆ ಸಮುಚ್ಚಯದ ಬಳಿ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಿದ್ದೇವೆ. 30 ಮನೆಗಳಿರುವ ಸಮುಚ್ಚಯದ ಸುತ್ತಲೂ ಖಾಸಗಿಯಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಖಾಸಗಿ ಭದ್ರತೆಯೂ ಬಿಗಿಯಾಗಿದೆ ಎಂದು ಹೇಳಿದರು.
ದೀಪಿಕಾ ಪಡುಕೋಣೆ ಅವರ ತಂದೆ ಮನೆ ಮಾತ್ರವಲ್ಲದೇ ದೀಪಿಕಾ ಅವರ ಅಜ್ಜಿ ಅಹಲ್ಯಾ ಅವರಿಗೆ ಸೇರಿರುವ, ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಮನೆಗೂ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ಮನೆಯಲ್ಲಿ ದೀಪಿಕಾ ಚಿಕ್ಕಪ್ಪ ಮಹೇಶ್ ವಾಸವಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಮಹೇಶ್ ಅವರು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಹಾಗಿದ್ದರೂ, ಇಬ್ಬರು ಸಿಬ್ಬಂದಿಯನ್ನು ಮನೆಯ ಬಳಿ ಭದ್ರತೆಗೆ ನಿಯೋಜಿಸಿದ್ದೇವೆ ಎಂದು ಮಲ್ಲೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos