ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್
ಬೆಳಗಾವಿ: ಡಿಸೆಂಬರ್ ತಿಂಗಳ ಬಳಿಕ ನಮ್ಮ ಮೆಟ್ರೋ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಗುರುವಾರ ಹೇಳಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಬೆಳಿಗ್ಗೆ ಮತ್ತು ಸಂಜೆ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚಿಸುತ್ತಿವೆ. ಈ ವೇಳೆ ಜನದಟ್ಟಣೆ ಹೆಚ್ಚಾಗಿರುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಅಂಗವಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು 4 ನಿಮಿಷಕ್ಕೊಂದು ರೈಲು ಸಂಚರಿಸುವ ವ್ಯವಸಥೆ ಮಾಡಲಾಗಿದೆ. ಶೀಘ್ರದಲ್ಲಿಯೇ ಇದನ್ನು 3 ನಿಮಿಷಕ್ಕೊಂದು ರೈಲು ಸಂಚರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈಲು ಬೋಗಿಗಳ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ತಿಂಗಳಿನಿಂದ ಹೆಚ್ಚುವರಿ ಬೋಗಿಗಳ ತಯಾರಿ ಕಾರ್ಯ ಆರಂಭಗೊಳ್ಳಲಿದೆ. 150 ಬೋಗಿಗಳ ತಯಾರಿಕೆಗೆ ಹಣವನ್ನು ಪಾವತಿ ಮಾಡಲಾಗಿದೆ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಹೆಚ್ಚುವರಿ ಬೋಗಿಗಳು ಮೆಟ್ರೋಗೆ ಅಳವಡಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಬಳಿಕ ಮೆಟ್ರೋದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಎಂಆರ್'ಸಿಎಲ್ ನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಮೇಲೆ ದೌರ್ಜನ್ಯವೆಸಗುವುದನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.