ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅನುದಾನ ಹಂಚಿಕೆಯಲ್ಲಿ ಈ ಭಾಗಕ್ಕೆ ಹೆಚ್ಚಿನ ಪಾಲು ನೀಡಿದ್ದೇವೆ. ಉತ್ತರ, ದಕ್ಷಿಣ ತಾರತಮ್ಯವಿಲ್ಲದ ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆ ವೇಳೆ ಸರ್ಕಾರದ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಉತ್ತರ ನೀಡಿರುವ ಅವರು, ನಾಲ್ಕೂವರೆ ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಖರ್ಜು ಮಾಡಿರುವ ಅನುದಾನದ ವಿವರಗಳನ್ನು ಅಂಕಿಅಂಶಗಳ ಸಹಿತ ಸದನದ ಮುಂದೆ ಇಟ್ಟರು.
ಉತ್ತರ ಕರ್ನಾಟಕ ಭಾಗಕ್ಕೆ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಯಾರೂ ಹೇಳುವಂತಿಲ್ಲ. ಈ ಹಿಂದಿದ್ದ ಬಿಜೆಪಿ ಸರ್ಕಾರಕ್ಕಿಂತಲೂ ದುಪ್ಪಟ್ಟಷ್ಟು ಹಣವನ್ನು ಈ ಭಾಗದ ಜನರಿಗೆ ನಮ್ಮ ಸರ್ಕಾರ ಖರ್ಚು ಮಾಡಿದೆ.
ಕೃಷಿ ಕ್ಷೇತ್ರಕ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ರೂ.9, 937 ಕೋಟಿ ಖರ್ಚು ಮಾಡಿತ್ತು. ಆದರೆ, ನಾವು ರೂ. 22,531 ಕೋಟಿ ಖರ್ಚು ಮಾಡಿದ್ದೇವೆ. ಉತ್ತರ ಕರ್ನಾಟಕ ನೀರಾವರಿ ವಲಯಕ್ಕೆ ಸರ್ಕಾರ ಹೆಚ್ಚು ಖರ್ಚು ಮಾಡಿದೆ. ವಾರ್ಷಿಕವಾಗಿ ರೂ.10,000 ಕೋಟಿ ಖರ್ಚು ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರಲ್ಲಿ ಈಗಾಗಲೇ ರೂ. 41, 621 ಖರ್ಚು ಮಾಡಿದ್ದೇವೆ. ಉಳಿದ ರೂ.50, 000 ಹಣವನ್ನು ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿಯೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 234ರಲ್ಲಿ 164 ಯೋಜನೆಯನ್ನು ಉತ್ತರ ಕರ್ನಾಟಕ್ಕೆ ನೀಡಲಾಗಿದೆ. 10,200 ಕಿರು ನೀರಾವರಿ ಯೋಜನೆಯಲ್ಲಿ 6130 ಉತ್ತರ ಭಾಗಕ್ಕೆ ನೀಡಲಾಗಿದೆ. 10,106 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 6,150 ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆರಂಭವಾಗಿದೆ. 462 ಹೊಸ ಗ್ರಾಮ ಪಂಚಾಯಿತಿಗಳಲ್ಲಿ 297 ಗ್ರಾಮ ಪಂಚಾಯಿತಿ ಉತ್ತರ ಕರ್ನಾಟಕದಲ್ಲಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ರೂ.12,244 ಕೋಟಿ ನೀಡಿದರೆ ದಕ್ಷಿಣ ಕರ್ನಾಟಕ್ಕೆ ರೂ.11,651 ಕೋಟಿ ನೀಡಲಾಗಿದೆ. ಕಬ್ಬು ಬೆಂಬಲ ಬೆಲೆಯಲ್ಲಿಯೂ ಒಟ್ಟು ರೂ.1767ಕೋಟಿ ಗಳಲ್ಲಿ ರೂ.1389 ಕೋಟಿ ಉತ್ತರ ಕರ್ನಾಟಕ ರೈತರಿಗೆ ದೊರೆತಿದೆ ಎಂದು ಲೆಕ್ಕ ನೀಡಿದರು.
ಈ ಹಿಂದಿನ ಅಧಿವೇಶನಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಭಟನೆ ಸಂಖ್ಯೆ ಕಡಿಮೆಯಿದೆ. ನಮ್ಮ ಸರ್ಕಾರದ ಆಡಳಿತದಿಂದ ಜನರು ತೃಪ್ತಿಪಟ್ಟಿದ್ದಾರೆಂಬುದನ್ನು ಇದೂ ಸೂಚಿಸುತ್ತದೆ. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಬಳಿಕ ಮಹಾದಾಯಿ ವಿಚಾರ ಕುರಿತಂತೆ ಮಾತನಾಡಿರುವ ಅವರು, ಮಹದಾಯಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯೆ ಪ್ರವೇಶ ಮಾಡಬೇಕು. ವಿರೋಧ ಪಕ್ಷಗಳ ನಾಯಕರು ಪ್ರಧಾನಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics