ಬೆಂಗಳೂರು: ದಿನನಿತ್ಯ ಬೆಳೆಗಳ ಮೇಲೆ ಕಾಡಾನೆಗಳು ನಡೆಸುತ್ತಿದ್ದ ದಾಳಿಗಳಿಂದಾಗಿ ಕಂಗಾಲಾಗಿದ್ದ ಹೆತ್ತೂರು ರೈತರಿಗೆ ಪರಿಹಾರ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಭರವಸೆ ನೀಡಿದೆ.
ಹಾಸನ ಜಿಲ್ಲೆಯ ಹೆತ್ತೂರು ಹೋಬ್ಳಿ, ಸಕಲೇಸಪುರ ತಾಲೂಕು ಸೇರಿದಂತೆ ಒಟ್ಟು 8 ಗ್ರಾಮಗಳ ಬೆಳೆಗಳ ಮೇಲೆ ದಿನನಿತ್ಯ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ರೈತರು ಕಂಗಾಲಾಗಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ನಿರ್ಮಾಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಸಿಎಎಂಪಿಎ) ಮೂಲಕ ಪರಿಹಾರ ನೀಡುವುದಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಭರವಸೆ ನೀಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ, ಕೇಂದ್ರ ಅಂಕಿ ಸಂಖ್ಯೆ ಮತ್ತು ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರು, ವಿಚಾರ ಸಂಬಂಧ ಕೇಂದ್ರ ಅರಣ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ಚರ್ಚೆಗಳನ್ನು ನಡೆಸುತ್ತೇನೆ. ಈ ಬಗ್ಗೆ ಜಿಲ್ಲಾ ಸಚಿವರೊಂದಿಗೂ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ.
ರಾಜ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದೆ. ಆದರೆ, ಯೋಜನೆಯನ್ನು ಜಾರಿಗೊಳಿಸುವಲ್ಲಿ ವಿಳಂಬವಾಗಿತ್ತು ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಮಾತನಾಡಿ, ಡಿಸೆಂಬರ್ ಮೊದಲ ವಾರದಲ್ಲಿ ದೆಹಲಿಗೆ ಹೋಗುತ್ತಿದ್ದು, ಈಗಾಗಲೇ ಸಿಎಎಂಪಿಎ ಅನುದಾನ ಬಿಡುಗಡೆಗೊಂಡಿದೆ. ಯೋಜನೆಯನ್ನು ಜಾರಿಗೆ ತಲು ರೈತರ ಭೂಮಿಯನ್ನು ಖರೀದಿ ಮಾಡಬೇಕಿದೆ. ಇದಕ್ಕೆ ಅನುದಾನದ ಹಣವನ್ನು ಬಳಕೆ ಮಾಡಲು ಕೇಂದ್ರ ಸರ್ಕಾರ ಅನುಮತಿ ಬೇಕಿದೆ. ಕಾರಿಡಾರ್ ಪ್ರದೇಶಗಳಲ್ಲಿ ರೈತರು ಜೀವನ ನಡೆಸುವುದಂತೂ ಅತ್ಯಂತ ಕಷ್ಟಕರ ಎಂದು ತಿಳಿಸಿದ್ದಾರೆ.
ಆನೆಗಳ ದಾಳಿಯಿಂದ ಪಶ್ಚಿಮ ಘಟ್ಟದ ಜನರು ಕಂಗಾಲಾಗಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲಿದೆ. ಯೋಜನೆಗೆ ರೂ.450 ಕೋಟಿ ಅಗತ್ಯವಿದೆ ಎಂದು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸದಸ್ಯ ದೇವರಾಜ್ ಅತ್ತಿಹಳ್ಳಿಯವರು ಹೇಳಿದ್ದಾರೆ.