ಧಾರವಾಡ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ರಾಜಿಯಾಗುವಂತೆ ಸಚಿವ ವಿನಯ್ ಕುಲಕರ್ಣಿಯವರು ಒತ್ತಡ ಹಾಕುತ್ತಿದ್ದಾರೆಂದು ಹತ್ಯೆಯಾದ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಅವರು ಶುಕ್ರವಾರ ಆರೋಪಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಗುರುನಾಥ್ ಗೌಡ ಅವರು, ಸಚಿವ ವಿನಯ್ ಕುಲಕರ್ಣಿಯವರೂ ಕೂಡ ಹತ್ಯೆಯಲ್ಲಿ ಭಾಗಿಯಾಗಿದ್ದು, ಪ್ರಕರಣ ಸಂಬಂಧ ರಾಜಿಯಾಗುವಂತೆ ಒತ್ತಡ ಹಾಕುತ್ತಿದ್ದಾರೆಂದು ಹೇಳಿದ್ದಾರೆ.
ಒಂದು ವೇಳೆ ಸಚಿವರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದೇ ಆದರೆ, ಪ್ರಕರಣದಲ್ಲೇಕೆ ಮೂಗು ತೂರಿಸುತ್ತಿದ್ದಾರೆ? ರಾಜಿಯಾಗುವಂತೆ ಏಕೆ ಒತ್ತಡ ಹೇರುತ್ತಿದ್ದಾರೆ. ಸಚಿವರ ದಿನಚರಿ ವೇಳಾಪಟ್ಟಿಯನ್ನು ನೋಡಿಕೊಳ್ಳುತ್ತಿರುವ ನಟರಾಜ್ ಎಂಬುವವರು ಅಕ್ಟೋಬರ್ ತಿಂಗಳಲ್ಲಿ ನಮ್ಮ ಮನೆಗೆ ಬಂದಿದ್ದರು. ಈ ವೇಳೆ ರಾಜಿಯಾಗುವಂತೆ ತಿಳಿಸಿದರು.
ಅಕ್ಟೋಬರ್ 23 ಮತ್ತು ನವೆಂಬರ್ 10, 17 ದಿನಾಂಕದಂದು ಡಿವೈಎಸ್ಪಿ ತುಳಜಪ್ಪ ಸುಲ್ಫಿಯವರೂ ಕೂಡ ನಮ್ಮ ಮನೆಗೆ ಭೇಟಿ ನೀಡಿದ್ದರು. ಅವರೂ ಕೂಡ ರಾಜಿಯಾಗುವಂತೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಬಳಿಕ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದು, ನಮ್ಮ ಹತ್ತಿರದವರಿಗೆ ವಿಚಾರ ತಿಳಿಸಿ ಸಲಹೆಗಳನ್ನು ಪಡೆದುಕೊಂಡೆ. ಬಳಿಕ ಸಚಿವರು ಹಾಗೂ ಅಧಿಕಾರಿಗಳು ನನ್ನೊಂದಿಗೆ ಫೋನ್ ನಲ್ಲಿ ನಡೆಸಿದ ಎಲ್ಲಾ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಆರಂಭಿಸಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಇದೀಗ ನಾನು ಸಂಭಾಷಣೆಗಳನನ್ನು ಬಿಡುಗಡೆ ಮಾಡಿದ್ದೇನೆ. ಸುಲ್ಫಿಯವರು ನಮ್ಮ ಮನೆಗೆ ಬಂದು ರಾಜಿಯಾಗುವಂತೆ ತಿಳಿಸಿದಾಗ, ನಾನೇಕೆ ರಾಜಿಯಾಗಬೇಕೆಂದು ಕೇಳಿದ್ದೆ. ಸಚಿವರೊಂದಿಗೆ ನಾವೇಕೆ ರಾಜಿಯಾಗಬೇಕೆಂದು ಪ್ರಶ್ನಿಸಿದ್ದೆ. ಪ್ರಕರಣದಲ್ಲಿ ಸಚಿವರು ಭಾಗಿಯಾಗಿಲ್ಲ ಎಂಬುದೇ ಆದರೆ, ಅವರೇಕೆ ರಾಜಿಯಾಗುವಂತೆ ತಿಳಿಸುತ್ತಿದ್ದಾರೆ ಎಂದು ಕೇಳಿದೆ.
ಕೂಡಲೇ ಸುಲ್ಫಿಯವರು ಸಚಿವರಿಗೆ ಕರೆ ಮಾಡಿ ಮಾತನಾಡಿದರು. ಬಳಿಕ ಸಚಿವರೊಂದಿಗೆ ಮಾತನಾಡಿದ ನಾನು ನೀವೇಕೆ ನಿಮ್ಮ ಜನರನ್ನು ನಮ್ಮ ಮನೆಗೆ ಕಳುಹಿಸುತ್ತಿದ್ದೀರಿ? ರಾಜಿಯಾಗುವಂತೆ ಏಕೆ ತಿಳಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಬಳಿಕ ಸಚಿವರು ಪ್ರಕರಣದಲ್ಲಿ ಆರೋಪಿಯಾಗಿರುವ ಬಸವರಾಜ ಮುತಗಿ ಜೊತೆಗೆ ರಾಜಿಯಾಗುವಂತೆ ತಿಳಿಸಿದರು. ಬಳಿಕ ನಾನು ಇದು ನಿಮಗೆ ಸಂಬಂಧಿಸಿದ ವಿಚಾರವಲ್ಲ. ನ್ಯಾಯಾಲಯ ಪ್ರಕರಣವನ್ನು ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದೆ.
ಬಳಿಕ ಸುಲ್ಫಿಯವರು ಮಹೇಶ್ ಶೆಟ್ಟಿಯವರ ಮನೆಯಲ್ಲಿ ಸಚಿವರೊಂದಿಗೆ ಭೇಟಿ ಏರ್ಪಡಿಸಿದ್ದರು. ಈ ವೇಳೆ ಮುತಗಿ ಜೊತೆಗೆ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಚಿವರಿಗೆ ತಿಳಿಸಿದ್ದೆ ಎಂದು ಗುರುನಾಥ್ ತಿಳಿಸಿದ್ದಾರೆ.
ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ಮಾತನಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಜಿಲ್ಲಾ ಸಚಿವರ ಬಳಿ ಮನವಿ ಮಾಡಿಕೊಂಡಿದ್ದೆ. ಆದರೆ, ಅವರು ಈ ವರೆಗೂ ಏನನ್ನೂ ಮಾಡಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಚಿವರೇಕೆ ಹಿಂಜರಿಯುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ಸ್ಥಳೀಯ ನ್ಯಾಯಲಯದ ಮೇಲೆ ನಮಗೆ ನಂಬಿಕೆಯಿಲ್ಲ. ಮತ್ತೊಂದು ನ್ಯಾಯಾಲಯಕ್ಕೆ ಪ್ರಕರಣವನ್ನು ಹಸ್ತಾಂತರಿಸುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಪ್ರಸ್ತುತ ಬಂಧನಕ್ಕೊಳಗಾಗಿರುವವರೇ ನನ್ನ ಪತಿಯಿನ್ನು ಹತ್ಯೆ ಮಾಡಿರಬಹುದು. ನನ್ನ ಪತಿ ಹತ್ಯೆಯ ಹಿಂದಿರುವ ಕಾರಣವೇನು. ಪ್ರಕರಣನ್ನು ಸಿಬಿಐ ತನಿಖೆಗೆ ವಹಿಸಲು ಸತ್ಯಾಂಶ ಬಹಿರಂಗಗೊಳ್ಳಲಿ ಎಂದು ತಿಳಿಸಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಸಚಿವ ವಿನಯ್ ಕುಲಕರ್ಣಿಯವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ಆರೋಪ ಮಾಡುತ್ತಿದ್ದಾರೆ. ಗುರುನಾಥ ಗೌಡ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ರೌಡಿ ಶೀಟರ್ ಆಗಿದ್ದಾರೆ. ಅಂತಹ ವ್ಯಕ್ತಿಗಳ ಬೆಂಬಲಕ್ಕೆ ಬಿಜೆಪಿ ನಿತಂತಿದೆ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ.