ರಾಜ್ಯ

ದೇವಸ್ಥಾನ, ಮಠಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು: ಧರ್ಮ ಸಂಸದ

Sumana Upadhyaya
ಮಂಗಳೂರು: ದೇವಸ್ಥಾನಗಳು, ಮಠ, ಮಾನ್ಯಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳಿಂದ ಸರ್ಕಾರ ದೂರವಿರುವಂತೆ ಕೇಳಲು ಧರ್ಮ ಸಂಸದ ನಿರ್ಣಯವೊಂದನ್ನು ಹೊರಡಿಸಿದೆ.
ಮಠಗಳು, ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದಿನನಿತ್ಯದ ವ್ಯವಹಾರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿವೆ. ಇದರಿಂದ ದೂರವಿರಬೇಕೆಂದು ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಸಾಧು ಸಂತರು ಖಂಡಿಸಿರುವ ಬೆನ್ನಲ್ಲೇ ಈ ನಿರ್ಣಯ ಹೊರಡಿಸಲಾಗಿದೆ.
ನಿರ್ಣಯವನ್ನು ಸುದ್ದಿಗಾರರಿಗೆ ಬಹಿರಂಗಪಡಿಸಿದ ವಿಶ್ವ ಹಿಂದೂ ಪರಿಷತ್ತಿನ ಜಂಟಿ ಕಾರ್ಯದರ್ಶಿ ಡಾ. ಸುರೇಂದ್ರ ಕುಮಾರ್ ಜೈನ್, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮುಖ್ಯವಾಗಿ ಬಿಜೆಪಿ ಆಡಳಿತವಿರುವ ಹರ್ಯಾಣಗಳಲ್ಲಿ ದೇವಸ್ಥಾನಗಳ ಆಡಳಿತವನ್ನು ಪಡೆದುಕೊಳ್ಳಲು ಸರ್ಕಾರಗಳು ಯತ್ನಿಸುತ್ತಿದ್ದು ಇದು ಸರಿಯಲ್ಲ ಎಂದು ಧಾರ್ಮಿಕ ಮುಖಂಡರು ಹೇಳಿದ್ದಾರೆ. ದೇವಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಮುಖ್ಯ ಹುದ್ದೆಗಳನ್ನು ರಾಜಕೀಯ ವ್ಯಕ್ತಿಗಳಿಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿರುವ ಸಾಧು ಸಂತರು ಸರ್ಕಾರ ಏಕೆ ಕೇವಲ ದೇವಸ್ಥಾನಗಳನ್ನು ಗುರಿಯಾಗಿಟ್ಟುಕೊಳ್ಳುತ್ತದೆ, ಚರ್ಚ್, ಮಸೀದಿಗಳನ್ನು ಪ್ರಶ್ನಿಸುವುದಿಲ್ಲ. ಅಲ್ಲಿ ಕೂಡ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಕೇಳಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಈ ನಡೆ ಹಿಂದೂ ಧರ್ಮವನ್ನು ದುರ್ಬಲಗೊಳಿಸಿ ಅವಿಭಜಿತ ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನವಾಗಿದೆ. ಒಂದು ಸಲ ದೇವಸ್ಥಾನಗಳ ಆಡಳಿತವನ್ನು ಸರ್ಕಾರ ತೆಗೆದುಕೊಂಡ ನಂತರ ಅದು ಪಾವಿತ್ರ್ಯತೆಯನ್ನು ಕಳೆದುಕೊಂಡು ಪ್ರವಾಸಿ ತಾಣವಾಗಿ ಮತ್ತು ಮನರಂಜನಾ ಸ್ಥಳವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಯಾವುದೇ ದೇವಸ್ಥಾನಗಳು ಮತ್ತು ಮಠಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳದಂತೆ ಧರ್ಮ ಸಂಸದ ಸರ್ಕಾರಕ್ಕೆ ಮನವಿ ಮಾಡಿದೆ.
SCROLL FOR NEXT