ಬೆಂಗಳುರು: ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ.
ನ್ಯಾಯಮೂರ್ತಿ ವಿ.ಎಸ್.ಮಳಿಮಠ ಅವರ ನಿಧನದ ಬಳಿಕ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಸ್. ರಾಜೇಂದ್ರ ಬಾಬು ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2016 ರ ಜನವರಿ ಎರಡನೆ ವಾರದಿಂದ ಅವರು ಈ ಪದವಿಯಲ್ಲಿದ್ದರು. ಬೆಳಗಾವಿ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಅಲ್ಲಿರುವ ವ್ಯಾಜ್ಯ ಪರಿಹರಿಸುವುದಕ್ಕೆ ಈ ಅಯೋಗದ ಕಾರ್ಯ ಮಹತ್ವದ್ದಾಗಿದೆ.
"ಬೆಳಗಾವಿ ವಿವಾದ ಸಂಬಂಧ ಈ ವರ್ಷ ಸುಪ್ರೀಂ ಕೋರ್ಟ್ ನಲ್ಲಿ ಐದಾರು ಬಾರಿ ವಿಚಾರಣೆಗೆ ಸಮಯ ನಿಗದಿಯಾಗಿತ್ತು. ಆದರೆ ವಿಚಾರಣೆ ನಡೆಯಲಿಲ್ಲ. ವಿಚಾರಣೆ ಮುಂದೂಡುತ್ತಲೇ ಇದ್ದಾರೆ. ಈ ಆಯೋಗದ ಅಧ್ಯಕ್ಷನಾಗಿ ನನಗೆ ಏನೂ ಕೆಲಸವಿಲ್ಲ. ಹೀಗಾಗಿ ರಾಜೀನಾಮೆ ನಿಡಿದ್ದೇನೆ" ಎಂದು ರಾಜೇಂದ್ರ ಬಾಬು ಹೇಳಿದ್ದಾರೆ.
"ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಸಂಬಂಧ ನಾನು ಯಾವ ರೀತಿಯ ಸಹಕಾರವನ್ನು ನೀಡಲೂ ಸಿದ್ದನಿದ್ದೇನೆ. ನಾನು ಪದವಿಯಿಂದ ಹೊರಗಿದ್ದುಕೊಂಡೇ ಮಾರ್ಗದರ್ಶನ ಮಾಡುತ್ತೇನೆ." ಎಂದಿರುವ ನ್ಯಾಯಮೂರ್ತಿಗಳು "ರಾಜೀನಾಮೆಯ ಕುರಿತಂತೆ ಬೇರೆ ಬಗೆಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳೊಡನೆ ಉತ್ತಮ ಒಡನಾಟ ಹೊಂದಿದ್ದೇನೆ" ಎಂದಿದ್ದಾರೆ.