ರಾಜ್ಯ

ಶಶಿಕಲಾ ಪೆರೋಲ್ ಅರ್ಜಿ ತಿರಸ್ಕ್ರತಗೊಂಡಿಲ್ಲ, ಪರಿಶೀಲನೆಯಲ್ಲಿದೆ: ಜೈಲು ಅಧಿಕಾರಿಗಳು

Shilpa D
ಬೆಂಗಳೂರು: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಸಲ್ಲಿಸಿದ್ದ ಪೆರೋಲ್ ಅರ್ಜಿ ತಿರಸ್ಕೃತಗೊಂಡಿದೆ ಎಂಬ ವರದಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.  ಶಶಿಕಲಾ ಪೆರೋಲ್ ಅರ್ಜಿ ತಿರಸ್ಕೃತಗೊಂಡಿಲ್ಲ, ಅರ್ಜಿ ಇನ್ನೂ ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಂಡತಿಯಾಗಿ ಈ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಹೀಗಾಗಿ, 15 ದಿನಗಳ ತುರ್ತು ಪೆರೋಲ್ ರಜೆ ನೀಡಬೇಕು ಎಂದು ಶಶಿಕಲಾ ಎಂಟು ಪುಟಗಳ ಅರ್ಜಿ ಸಲ್ಲಿಸಿದ್ದರು. ಆಸ್ಪತ್ರೆಗೆ ದಾಖಲಾಗಿರುವ ಶಶಿಕಲಾ ಪತಿ ನಟರಾಜನ್ ಅವರಿಗೆ ಯಕೃತ್ ಕಸಿಗಾಗಿ  ಕಾಯುತ್ತಿದ್ದಾರೆ.
ಶಶಿಕಲಾ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳು ತನಿಖಾ ಹಂತದಲ್ಲಿರುವುದರಿಂದ ಸಾಮಾನ್ಯ ಪೆರೋಲ್ ನೀಡಲು ಬರುವುದಿಲ್ಲ. ಪತಿಯ ಅನಾರೋಗ್ಯದ ಕಾರಣ ನೀಡಿರುವುದರಿಂದ ತುರ್ತು ಪೆರೋಲ್ ನೀಡಬಹುದು, ಅವರು ಅಗತ್ಯ ದಾಖಲೆಗಳನ್ನು ವಕೀಲರ ಮೂಲಕ ತರಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಶಶಿಕಲಾ ಪೆರೋಲ್ ಅರ್ಜಿ ತಿರಸ್ಕೃತಗೊಂಡಿದೆ ಎಂಬ ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ. ಶಶಿಕಲಾ ಸಲ್ಲಿಸಿರುವ ಅರ್ಜಿಯಲ್ಲಿ ಪತಿಯ ಅನಾರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಹಾಗೂ ತಾವು ಎದುರಿಸುತ್ತಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಯಾವುದೇ ವಿವರಗಳು ಇರಲಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT