ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಸಿದ್ದರಾಮಯ್ಯ
ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಹೊಸ ಹೊಸ ಚಿಂತನೆಯ ಅಗತ್ಯವಿದೆ, ಅಸಮಾನತೆ ಎಂಬುದು ಹೀಗೆ ಮುಂದುವರಿದರೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಮಾಜಿ ಪ್ರಧಾನಿ ಮನ ಮೋಹನ ಸಿಂಗ್ ಪ್ರತಿಪಾದಿಸಿದ್ದಾರೆ.
ತಾವು ಕೇಂದ್ರ ಹಣಕಾಸು ಸಚಿವರಾಗಿದ್ದ ವೇಳೆ ಅಂದರೆ 1991-96ರಲ್ಲಿ ಮಾಡಿದ ಆರ್ಥಿಕ ಸುಧಾರಣೆಗಳು ಹಾಗಬ 2004-2014ರ ವರೆಗೆ ಪ್ರಧಾನಿಯಾಗಿದ್ದಾ ಸಮಯದಲ್ಲಿ ಕೈಗೊಂಡ ಉದಾರೀಕರಣ ನೀತಿಯಿಂದಾಗಿ ಜನರಿಗೆ ಹೊಸ ಅವಕಾಶಗಳು ಸಿಕ್ಕವು,ಆದರೆ ಆ ಪ್ರಕ್ರಿಯೆ ಇನ್ನೂ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್’ನ ಶೈಕ್ಷಣಿಕ ಪ್ರಾರಂಭೋತ್ಸವ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣೆಗೆ ವೇದಿಕೆಯಲ್ಲಿ ಮಾತನಾಡಿದ ಅವರು, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನವೀನ ಚಿಂತನೆ ಹಾಗೂ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಅದರಿಂದ ಮಾತ್ರ ಆರ್ಥಿಕ ಬೆಳವಣಿಗೆ ದರ ಹೆಚ್ಚಾಗಲು ಸಾಧ್ಯ ಎಂದೂ ಅವರು ಅಭಿಪ್ರಾಯಪಟ್ಟರು.
ವಿತ್ತೀಯ ಕೊರತೆಯಿಲ್ಲದಂತೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ, ಆರ್ಥಿಕ ಶಿಸ್ತು ಪಾಲಿಸುತ್ತಿರುವ ಅತ್ಯುತ್ತಮ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸಿದ್ದಾರೆ ಎಂದು ಮನಮೋಹನಸಿಂಗ್ ಬಣ್ಣಿಸಿದರು.
12 ಯಶಸ್ವಿ ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯ, ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಯುಪಿಎ ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ಅನುಷ್ಠಾನ ಮಾಡಲಾಗಿದ್ದು, ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು ಶ್ಲಾಘನೀಯ. ರೈತರ ಸಾಲಮನ್ನಾಕ್ಕೆ 8,160 ಕೋಟಿ ಕೊಟ್ಟಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕವು ಇಡೀ ದೇಶದ ಅತ್ಯುತ್ತಮ ಶೈಕ್ಷಣಿಕ ತಾಣವಾಗಿದೆ. ಭಾರತದಲ್ಲಿ 45,000 ವಿದೇಶಿ ವಿದ್ಯಾರ್ಥಿಗಳು ಓದುತ್ತಿದ್ದು, ಈ ಪೈಕಿ 13,600 ಮಂದಿ ಇಲ್ಲೇ ಓದುತ್ತಿರುವುದು ಕರ್ನಾಟಕದ ಹೆಮ್ಮೆಗೆ ಸಾಕ್ಷಿ ಎಂದರು.
2007–08ರಲ್ಲಿ ಜಿಡಿಪಿ ಶೇ 9ರಷ್ಟಿದ್ದಾಗ ಬಂಡವಾಳ ಹೂಡಿಕೆ ಪಾಲು ಶೇ 38ರಷ್ಟಿತ್ತು. ಈ ಪ್ರಮಾಣ ಈಗ ಶೇ 27ಕ್ಕೆ ಇಳಿಕೆಯಾಗಿದೆ. ಬಂಡವಾಳ ಹೂಡಿಕೆ ದರ ಹೆಚ್ಚಿದ್ದರೆ ಉತ್ಪಾದಕತೆಯ ಮಟ್ಟವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಆರ್‌ಬಿಐ ನಿವೃತ್ತ ಗವರ್ನರ್ ಹಾಗೂ ಮದ್ರಾಸ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಅಧ್ಯಕ್ಷ ಸಿ. ರಂಗರಾಜನ್ ತಿಳಿಸಿದ್ದಾರೆ.
ದೇಶದ ‘ಬಂಡವಾಳ ಏರಿಕೆಯ ಮೌಲ್ಯದ ಅನುಪಾತ’ವು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ.ಆರ್ಥಿಕ ಹಿಂಜರಿತದಿಂದ ಹೊರಬೇಕಾದರೆ ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರಾರಂಭಿಸಲು ಉತ್ತೇಜನ ನೀಡಬೇಕು. ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡುವುದನ್ನು ಸರಳೀಕರಣಗೊಳಿಸುವ ಜತೆಗೆ, ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು. ಐದಾರು ವರ್ಷ ಜಿಡಿಪಿ ಬೆಳವಣಿಗೆ ಶೇ 8ರಿಂದ ಶೇ 9ರ ಆಸುಪಾಸಿನಲ್ಲಿದ್ದು, ಆರ್ಥಿಕತೆ ಸುಸ್ಥಿರವಾಗಿರಲು ಮನಮೋಹನಸಿಂಗ್ ಅವರಂತಹ ಆರ್ಥಿಕ ತಜ್ಞರು ದೇಶದ ನಾಯಕತ್ವ ವಹಿಸಿದ್ದೇ ಕಾರಣ ಎಂದು ಅಭಿಪ್ರಾಯ ಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics