ಬೆಂಗಳೂರು: ಮನುಷ್ಯನ ದೇಹದಲ್ಲಿ ಮೀಟರ್ ಎಂಬುದು ಎಲ್ಲಿದೆ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿವರಣೆ ನೀಡಬೇಕೆಂದು ಕೋರಿ ಮಾಹಿತಿ ಹಕ್ಕು ಕಚೇರಿಗೆ ಅರ್ಜಿ ಸಲ್ಲಿಸಿರುವ ಸಂಬಂಧ ವರದಿಯಾಗಿದೆ.
ಸೆಪ್ಟಂಬರ್ 23 ರಂದು ನಡೆದ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ದ ಹರಿಹಾಯ್ದಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ರೈತರ ರಾಷ್ಚ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಮಾಡುವಂತೆ ಕೇಳಲು ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
ಈ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ಸಿದ್ದರಾಮಯ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಇದೊಂದು ಅಸಂಬದ್ದ ಹೇಳಿಕೆಯಾಗಿದೆ ಎಂದು ಆರೋಪಿಸಿದೆ. ಈ ಸಂಬಂಧ ಮಂಡ್ಯ ಮೂಲದ ಸಿ.ಟಿ ಮಂಜುನಾಥ್ ಎಂಬುವರು ಸಿದ್ದರಾಮಯ್ಯ ಅವರು ಬಳಸಿರುವ ಮೀಟರ್ ಪದದ ಅರ್ಥ ತಿಳಿಸಿಕೊಡುವಂತೆ ಆರ್ ಟಿ ಐ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಮಾನವ ದೇಹದ ರೇಖಾ ಚಿತ್ರ ಬರೆದು, ಇಲ್ಲಿ ಮೀಟರ್ ಎಲ್ಲಿದೆ ಎಂಬುದನ್ನು ತಿಳಿಸುವಂತೆ ಕೋರಿದ್ದಾರೆ. ನಾನು ಮಾನವ ದೇಹದ ರಚನೆ ಬಗ್ಗೆ ತಿಳಿದಿದ್ದೇನೆ, ಮಿದುಳು, ಹೃದಯ, ಶ್ವಾಸಕೋಶ, ಕಿಡ್ನಿಗಳ ಬಗ್ಗೆ ಜೀವಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದೇನೆ. ಆದರೆ ಈ ಮೀಟರ್ ಎಂಬ ಅಂಗದ ಬಗ್ಗೆ ನಾವು ಎಲ್ಲಿಯೂ ಓದಲಿಲ್ಲ, ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಮಾನವ ದೇಹದ ನೀಟಾದ ಚಿತ್ರ ಬರೆದು ಮೀಟರ್ ಎಂಬುದು ಎಲ್ಲಿರುತ್ತೆ ಎಂಬ ಬಗ್ಗೆ ಗುರುತಿಸಿ ಕಳುಹಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ಸಿಎಂ ಅವರ ವಿಳಾಸಕ್ಕೆ ಸೆಪ್ಟಂಬರ್ 25 ರಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಲಾಗಿದೆ, ಈ ಸಂಬಂಧ ಮಂಡ್ಯ ಡಿ,ಸಿ ಅವರನ್ನು ಸಂಪರ್ಕಿಸಿದಾಗ, ಎಲ್ಲಾ ಅರ್ಜಿಗಳು ಸಿಎಂ ವಿಳಾಸಕ್ಕೆ ಬರುತ್ತವೆ, ಜಿಲ್ಲಾ ಮಾಹಿತಿ ಅಧಿಕಾರಿ ಅದನ್ನ ಸಿಎಂ ಕಚೇರಿಗೆ ರವಾನಿಸುತ್ತಾರೆ ಎಂದು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಹೇಳಿದ್ದಾರೆ.