ಬೆಂಗಳೂರು: ಮಂಗಳೂರಿನಲ್ಲಿ ಹತ್ಯೆಗೀಡಾದ ಮೊಹಮದ್ ಜುಬೈರ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು,ಟಿ ಖಾದರ್ ರಾಜಿನಾಮೆ ನೀಡುವಂತೆ ಬಿಜೆಪಿ ರಾಜ್ಯಸರ್ಕಾರಕ್ಕೆ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ 13ನೇ ರಾಷ್ಟ್ರೀಯತವಾದಿಗಳ ಹತ್ಯೆ ಇದಾಗಿದ್ದು, ಜುಬೈರ್, ಬಿಜೆಪಿ ಉಲ್ಲಾಳ ಮಂಡಲ್ ಕಮಿಟಿಯ ಸದಸ್ಯರಾಗಿದ್ದಾರೆ. ಜುಬೈರ್ ಕೊಲೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಡ್ರಗ್ ಮಾಫಿಯಾದಿಂದ ಇಂತಹ ಕೊಲೆ ಪ್ರಕರಣಗಳು ನಡೆಯುತ್ತಿವೆ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ಮುಖಂಡ ಜಿ. ಮಧು ಸೂಧನ್ ಮತ್ತಪ ಅನ್ವರ್ ಮನಪ್ಪಾಡಿ ದೂರಿದ್ದಾರೆ.
ಡ್ರಗ್ ಮಾಫಿಯಾ ತಂಡ ಸಮಾಜ ವಿರೋಧಿ ಕೆಲಸಗಳಲ್ಲಿ ಪಾಲ್ಗೋಳ್ಳುತ್ತಿದೆ ಎಂದು ಜುಬೈರ್ ದೂರು ದಾಖಲಿಸಿದ್ದರು. ಜುಬೈರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ಕೆಲವು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಇತ್ತೀಚೆಗೆ ಅವರು ಜೈಲಿನಿಂದ ಹೊರಬಂದಿದ್ದರು, ಹೀಗಾಗಿ ಅವರೇ ಈ ಹತ್ಯೆ ನಡೆಸಿದ್ದಾರೆ ಎಂದು ನಮಗೆ ಅನುಮಾನ ಮೂಡಿದೆ ಎಂದು ಮನಪ್ಪಾಡಿ ಹೇಳಿದ್ದಾರೆ.
ನೈತಿಕ ಹೊಣೆ ಹೊತ್ತು ಆಹಾರ ಮತ್ತು ನಾಗರಿಕ ಸಚಿವ ಯು.ಟಿ ಖಾದರ್ ರಾಜಿನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಖಾದರ್ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇಲಿಯಾಸ್ ಎಂಬಾತ ಜುಬೈರ್ ಕೊಲೆ ಮಾಡಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.