ಬೆಂಗಳೂರು: ಒಡಿಶಾ ಮೂಲದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿವಾಳದ ತಾವರೆಕರೆ ಮುಖ್ಯರಸ್ತೆಯ ಚಾಕೋಲೇಟ್ ಕಾರ್ಖಾನೆಯ ಬಳಿ ಸೋಮವಾರ ನಡೆದಿದೆ.
ಹತ್ಯೆಯಾದ ಟೆಕ್ಕಿ ಪ್ರಣೊಯ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಇಂದು ಬೆಳಗಿನ ಜಾವ ಹೊಟ್ಟೆ,ಎದೆಗೆ ಚಾಕುವಿನಿಂದ ಇರಿದು ಕೊಲೆಮಾಡಲಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಣವ್ ಮಿಶ್ರಾ ನಿನ್ನೆ ರಾತ್ರಿ ಚಾಕೋಲೇಟ್ ಕಾರ್ಖಾನೆಯ ಬಳಿಯಿದ್ದ ಸ್ನೇಹಿತನ ಮನೆಗೆ ಬಂದು ಊಟ ಮುಗಿಸಿ ತಡರಾತ್ರಿ ಹೋಗುತ್ತಿದ್ದಾಗ ಆತನ ಎದೆ ಹೊಟ್ಟೆಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.
ಚಾಕು ಹೊಟ್ಟೆಯ ಆಳಕ್ಕೆ ಇಳಿದು ಗಂಭೀರವಾಗಿ ಗಾಯಗೊಂಡಿದ್ದ ಮಿಶ್ರಾ ಅವರನ್ನು ಕೂಡಲೇ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ೫ರ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಮಿಶ್ರಾ ಅವರ ಮೊಬೈಲ್ ದೊರೆತಿದ್ದು, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.