ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಆಚರಣೆ ವಿಷಯ ವಿಧಾನಸಭಾ ಸಚಿವಾಲಯ ಮತ್ತು ಸಚಿವ ಸಂಪುಟದ ಮಧ್ಯೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಪರಸ್ಪರ ಸಂಘರ್ಷಕ್ಕೆ ಕಾರಣವಾಗಿದೆ.
ಅಕ್ಟೋಬರ್ 25 ಮತ್ತು 26ರಂದು ಎರಡು ದಿನ ವಿಧಾನಸೌಧದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 26 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ವಿಧಾನಸಭೆ ಸಚಿವಾಲಯ ನೇರವಾಗಿ ಆರ್ಥಿಕ ಇಲಾಖೆಗೆ ಕಳುಹಿಸಿರುವುದು ಸಿಎಂ ಸಿದ್ದರಾಮಯ್ಯ ಕೋಪಕ್ಕೆ ಕಾರಣವಾಗಿದೆ. ಸಚಿವಾಲಯ ನಡೆಸುತ್ತಿರುವ ಈ ಸಿದ್ದತಾ ಪ್ರಕ್ರಿಯೆಯಲ್ಲಿ ಸಿಎಂ ಮತ್ತು ಅವರ ಸಂಪುಟದ ಹಲವು ಸಹೋದ್ಯೋಗಿಗಳು ಭಾಗಿಯಾಗಿಲ್ಲ,
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿದ್ದು, ವಿಧಾನ ಸಭೆ ಸ್ಪೀಕರ್ ಕೆ.ಬಿ ಕೋಳಿವಾಡ ಮತ್ತು ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ವಜ್ರ ಮಹೋತ್ಸವ ಸಂಬಂಧ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಲವು ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಜಂಟಿ ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯ ಒಪ್ಪಿಗೆಯನ್ನೇ ಪಡೆದಿಲ್ಲ. ಅದಕ್ಕೂ ಮೊದಲೇ ಕೋಳಿವಾಡ ಮತ್ತು ಶಂಕರಮೂರ್ತಿ ತಾವಾಗಿಯೇ ನಿರ್ಧಾರ ಕೈಗೊಂಡು ರಾಷ್ಟ್ರಪತಿ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದ ಅಂದಾಜು ವೆಚ್ಚ ಕುರಿತು ಸಲ್ಲಿಕೆಯಾದ ಪ್ರಸ್ತಾವನೆ ಕುರಿತು ಹಲವು ಸಚಿವರು ಆಚ್ಚರಿ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಉದ್ಘಾಟನಾ ಭಾಷಣ ಹೊರತು ಪಡಿಸಿ, ರಾಜ್ಯದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಧಾರ್ಮಿಕತೆಗಳನ್ನು ಪ್ರದರ್ಶನಕ್ಕೆ ಕಾರ್ಯಕ್ರಮ ಸಂಪೂರ್ಣವಾಗಿ ಮೀಸಲಾಗಿರುತ್ತದೆ. ವಿಧಾನ ಸೌಧದ ಪೂರ್ವಧ್ವಾರದಲ್ಲಿ ಎರಡು ದಿನಗಳ ಸಂಜೆ ವೇಳೆ ಕಾರ್ಯಕ್ರಮವಿರುತ್ತದೆ.
ಇನ್ನೂ ನವೆಂಬರ್ 13 ರಿಂದ ರಾಜ್ಯ ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗಗಳ ಕುಂದುಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos