ಬೆಂಗಳೂರು: ಬೆಂಗಳೂರಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, 115 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದ ಮಳೆಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕಳೆದ 2 ತಿಂಗಳಿನಿಂದ ಸುರಿದಿರುವ ಮಳೆಯಿಂದಾಗಿ 2017 ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾದ ವರ್ಷವಾಗಿದೆ. ವಾರ್ಷಿಕವಾಗಿ 1606.8 ಮಿಮೀ ಮಳೆಯಾಗಿದ್ದು ಈ ಹಿಂದಿನ ದಾಖಲೆಯಾಗಿತ್ತು. ಈಗ ಶನಿವಾರ ಬೆಳಿಗ್ಗೆ ವರೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ 1615.2 ಮಿ.ಮೀ ಮಳೆಯಾಗಿದ್ದು 115 ವರ್ಷಗಳಲ್ಲಿಯೇ ಗರಿಷ್ಠ ಎಂದು ಹೇಳಲಾಗುತ್ತಿದೆ.
ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ಬೆಂಗಳೂರು ವಿಚಿತ್ರ ಹವಾಮಾನವನ್ನು ಎದುರಿಸುತ್ತಿದ್ದು, ನೈಋತ್ಯ ಮುಂಗಾರಿನ ಕಾಲಮಾನ ಹೆಚ್ಚಿದ್ದು, ಈಶಾನ್ಯ ಮುಂಗಾರು ಇದೇ ವೇಳೆ ಪ್ರಾರಂಭವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಉಂಟಾಗಿರುವುದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.