ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಅಪೋಲೊ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 4 ದಿನ ದಾಖಲಾಗಿದ್ದರು,ಆದರೆ ಅವರ ಅಸ್ಪತ್ರೆ ವೆಚ್ಚ ಭರಿಸಲು ಆಕೆಗೆ ಸಾಧ್ಯವಾಗುತ್ತಿಲ್ಲ ಎಂದು ಸಾಕು ಮಗ ಉಮೇಶ್ ಹೇಳಿದ್ದಾರೆ.
ಪದೇ ಪದೇ ಸರ್ಕಾರದ ಘೋಷಣೆಗಳಿಂದಾಗಿ ಸಾಲು ಮರದ ತಿಮ್ಮಕ್ಕ ಶ್ರೀಮಂತೆಯಾಗಿದ್ದಾರೆ ಎಂದು ಜನರು ಭಾವಿಸುವಂತಾಗಿದೆ,ಆದರೆ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದೇ ಚಿನ್ನದ ಪದಕಗಳನ್ನು ಗಿರವಿ ಇಡಲಾಗಿತ್ತು ಎಂದು ಹೇಳಿದ್ದಾರೆ.
ಬಿಬಿಎಂಪಿ ಕಾರ್ಪೋರೇಟರ್ ಬಸವರಾಜ್ ನೆರವಿನಿಂದಾಗಿ ಸಾಲ ಮರುಪಾವತಿಸಿ ಚಿನ್ನದ ಪದಕಗಳನ್ನು ವಾಪಸ್ ಪಡೆಯಲಾಯಿತು, ಸಂಸದ ರಾಜೀವ್ ಚಂದ್ರಶೇಖರ್ ತಿಮ್ಮಕ್ಕ ಅವರ ವೈದ್ಯಕೀಯ ವೆಚ್ಚ ಭರಿಸಿದರು. ಆದರೆ ಸರ್ಕಾರ ಮಾತ್ರ ತಿಮ್ಮಕ್ಕನ ಹೆಸರಲ್ಲಿ ಪ್ರತಿ ವರ್ಷ ಬಜೆಟ್ ನಲ್ಲಿ ಕೋಟಿ ಕೋಟಿ ರು ಘೋಷಣೆ ಮಾಡುತ್ತದೆ. ಈ ಘೋಷಣೆ ಕೇವಲ ಪತ್ರದಲ್ಲಿ ಮಾತ್ರ ಉಳಿದಿದೆ, ಯಾವುದು ಅನುಷ್ಠಾನವಾಗಿಲ್ಲ, ಇದು ಜನರಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದೆ ಎಂದು ಅವರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ನಮಗೆ ಸ್ಪೂರ್ತಿಯ ಮೂಲ, ಆಕೆಯ ಕೆಲಸಗಳು ನಮಗೆ ಆದರ್ಶದಾಯಕ, ಕೇವಲ 500 ರು ನಲ್ಲಿ ಅವರು ಹೇಗೆ ತಿಂಗಳ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯ? ಸುಳ್ಳು ಭರವಸೆಗಳನ್ನು ನೀಡುವ ಬದಲು ಆಕೆಯ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಲಿ ಎಂದು ನಗರ ಸಂರಕ್ಷಕ ವಿಜಯ್ ನಿಶಾಂತ್ ಹೇಳಿದ್ದಾರೆ,
ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಆಕೆಯ ಜೀವನದ ಬಗ್ಗೆ ಓದುತ್ತಾರೆ, ಇಂಥಹ ವೇಳೆ ಅವರನ್ನು ನಿರ್ಲಕ್ಷ್ಸಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.