ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರಂಗಕರ್ಮಿ ಪ್ರಸನ್ನ
ಬೆಂಗಳೂರು: ಎಲ್ಲಾ ಕೈಮಗ್ಗ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಘೋಷಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೈಮಗ್ಗ ಉತ್ಪನ್ನಗಳ ಮೇಲೆ ಕರ ವಿಧಿಸಿದ್ದರಿಂದ ಬಡವರಿಗೆ ಆಗುತ್ತಿರುವ ಅನ್ಯಾಯವಾಗುತ್ತಿದೆ ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಬಡವರಿಗೆ ತೆರಿಗೆ ಇರಲಿಲ್ಲ. ಶ್ರೀಮಂತರಿಗೆ ಮಾತ್ರ ತೆರಿಗೆ ಇರುತ್ತಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದ ಸಕಾರಾತ್ಮಕ ತಾರತಮ್ಯ ನೀತಿಯನ್ನು ತೆರಿಗೆ ವಿಚಾರದಲ್ಲಿ ಪಾಲಿಸಲಾಗುತ್ತಿತ್ತು. ಈ ಬಾರಿ ಎಲ್ಲರಿಗೂ ಒಂದೇ ರೀತಿಯ ತೆರಿಗೆ ವಿಧಿಸಲಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ತಪ್ಪನ್ನು ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ’ ಎಂದು ಅವರು ಎಚ್ಚರಿಸಿದರು.
ನವೆಂಬರ್ 5ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಕೈ ಉತ್ಪನ್ನಗಳಿಗೆ ಶೂನ್ಯ ಕರ ವಿಧಿಸುವ ಕುರಿತು ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದರು.
20 ಲಕ್ಷದಷ್ಟು ವಹಿವಾಟು ನಡೆಸುವ ತಯಾರಕರು ಹಾಗೂ ಸ್ವಸಹಾಯ ಸಂಘಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೈ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಈ ಮಿತಿಯನ್ನು 50 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಕೈ ಉತ್ಪನ್ನ– ಸಮಿತಿ ವ್ಯಾಖ್ಯಾನ: ‘ಕೈ ಉತ್ಪನ್ನಗಳು ಯಾವುವು ಎಂಬ ವಿಚಾರದಲ್ಲಿ ಅನೇಕ ಗೊಂದಲಗಳಿದ್ದವು. ಪ್ರೊ.ಆಶಿಸ್ ನಂದಿ ನೇತೃತ್ವದ ಸಮಿತಿ ಈ ಬಗ್ಗೆ ಸ್ಪಷ್ಟ ವ್ಯಾಖ್ಯಾನ ಮಾಡಿದೆ’ ಎಂದು ಪ್ರಸನ್ನ ತಿಳಿಸಿದರು. ವ್ಯವಸಾಯ ಉತ್ಪನ್ನ, ಅರಣ್ಯ ಉತ್ಪನ್ನ, ಕೈಮಗ್ಗ, ಕರಕುಶಲ ಉತ್ಪನ್ನಗಳು ಸೇರಿ ಒಟ್ಟು 200ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಮಿತಿ ಪಟ್ಟಿ ಮಾಡಿದೆ. ಕೈಯಿಂದ ನಡೆಸುವ ಕೃಷಿ, ಕಟ್ಟಡ ನಿರ್ಮಾಣದಂತಹ ಸೇವೆಗಳನ್ನೂ ಇದರ ವ್ಯಾಪ್ತಿಯಲ್ಲಿ ಗುರುತಿಸಿದೆ’ ಎಂದು ವಿವರಿಸಿದರು.
ಇನ್ನೂ ಪ್ರಸನ್ನ ಅವರ ಬೇಡಿಕೆಗೆ ತಾವು ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳು ಟ್ಟೀಟ್ ಮಾಡಿದ್ದಾರೆ.