ರಾಜ್ಯ

ಬೆಂಗಳೂರು: ಸೌಂದರ್ಯ ಲಹರಿ ಪಾರಾಯಣೋತ್ಸವ ಸಮಾರೋಪಕ್ಕೆ ಪ್ರಧಾನಿ ಮೋದಿ

Srinivas Rao BV
ಬೆಂಗಳೂರು: ವೇದಾಂತ ಭಾರತಿ ಸಂಸ್ಥೆ ಅ.29 ರಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಸೌಂದರ್ಯ ಲಹರಿ ಪಾರಾಯಣೋತ್ಸವ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಸಾಮೂಹಿಕ ಮಹಾಸಮರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. 
ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿಯ ಸಪ್ತಾಹವನ್ನು ಸಂಸ್ಥೆಯು ಇತ್ತೀಚೆಗಷ್ಟೇ ಆಯೋಜಿಸಿತ್ತು. ಈ ಕಾರ್ಯಕ್ರಮದ ಮಹಾಸಮರ್ಪಣೆ ಅ.28ಕ್ಕೆ ಪ್ರಾರಂಭವಾಗಲಿದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು ಒಂದು ಸಾವಿರ ಶಾಲೆಗಳ ಮಕ್ಕಳು ಈ ಪಾರಾಯಣದಲ್ಲಿ ಪಾಲ್ಗೊಳ್ಳಲಿದ್ದಾರೆ 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. 
ಅ.28 ರಂದು ನಡೆಯುವ ಪಾರಾಯಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಲಿದ್ದು, ಅ.29 ರಂದು ಮಧ್ಯಾಹ್ನ ಪ್ರಧಾನಿ ಮೋದಿ ಮಕ್ಕಳನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಕಳೆದ 10 ವರ್ಷಗಳಿಂದ ವೇದಾಂತ ಭಾರತಿ ಸಂಸ್ಥೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಸಹಯೋಗದಲ್ಲಿ  ಸೌಂದರ್ಯ ಲಹರಿಯ ಶ್ಲೋಕಗಳನ್ನು ಪಾರಾಯಣ ಮಾಡಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಅಭಿಯಾನ ನಡೆದಿದೆ.  "ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ನೈತಿಕತೆಯನ್ನು ಬೆಳೆಸುವುದರ ಜೊತೆಗೆ ಅಧ್ಯಾತ್ಮದ ಪಾಠವೂ ಅಗತ್ಯವಾಗಿದೆ ಈ ಪ್ರಯತ್ನದ ಭಾಗವಾಗಿ ತಾಯಿಯನ್ನು ಆರಾಧಿಸುವ ಶ್ಲೋಕವಾದ ಸೌಂದರ್ಯ ಲಹರಿಯನ್ನು ಮಕ್ಕಳಿಗೆ ದೈನಂದಿನ ವ್ಯಾಸಂಗಕ್ಕೆ ಸಮಸ್ಯೆಯಾಗದಂತೆ ಪಾರಾಯಣ ಮಾಡುವುದನ್ನು ಹೇಳಿಕೊಡಲಾಗಿದೆ ಎಂದು ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಶಂಕರ ಭಾರತೀ ಸ್ವಾಮಿಗಳು ಹೇಳಿದ್ದಾರೆ. ಈ ಬಾರಿ ಪಾರಾಯಣದ ಜತೆಗೆ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಪಾರಾಯಣೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ಎಸ್‌.ಎಸ್‌.ನಾಗಾನಂದ ತಿಳಿಸಿದ್ದಾರೆ. 
SCROLL FOR NEXT