ಕಲ್ಬುರ್ಗಿ: ಎರಡು ಪ್ರತ್ಯೇಕ ಪ್ರಕರಣ, ಇಬ್ಬರ ಹತ್ಯೆ
ಕಲ್ಬುರ್ಗಿ: ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಓರ್ವ ಮಹಿಳೆ ಮತ್ತು ಯುವಕನೊಬ್ಬ ಮೃತಪಟ್ಟಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಹಾಬಾದ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದರೆ ಇನ್ನೊಂದೆಡೆ ಕಲ್ಬುರ್ಗಿಯ ಬ್ರಹ್ಮಪುರ ಬಡಾವಣೆಯಲ್ಲಿ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಗೈಯಲಾಗಿದೆ.
ಮೊದಲ ಪ್ರಕರಣದಲ್ಲಿ ನಾಗಪ್ಪ ಎನ್ನುವ ವ್ಯಕ್ತಿ ಸಾಕಷ್ಟು ಸಾಲ ಮಾಡಿದ್ದ ಕಾರಣ ಇದನ್ನು ಪ್ರಶ್ನಿಸಿದ್ದ ತನ್ನ ಪತ್ನಿ ಶಿವಮ್ಮನನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ. ಶಿವಮ್ಮ (30) ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಗಪ್ಪ ತಲೆ ಮರೆಸಿಕೊಂಡಿದ್ದಾನೆ. ಶಹಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಬುರ್ಗಿಯ ಬ್ರಹ್ಮಪುರದ ರಾಯರ ಗುಡಿ ಹತ್ತಿರದಲ್ಲಿ ದುಷ್ಕರ್ಮಿಗಳ ಗುಂಪು ಯುವಕನೊಬ್ಬನ ಮೇಲೆ ದಾಳಿ ನಡೆಸಿದ್ದು ಸಂಗಮೇಶ ಸಿದ್ರಾಮಪ್ಪ ನಂದರಗಿ (18) ದಾಳಿಗೊಳಗಾದ ಯುವಕ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಯುವಕ ಮೃತಪಟ್ಟಿದ್ದಾನೆ. ಇದು ಗ್ಯಾಂಗ್ ವಾರ್ ಎನ್ನಲಾಗಿದ್ದು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.