ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಲ್ದಾಣಗಳನ್ನು ಇನ್ನಷ್ಟು ಆಕರ್ಷಣೆಗೊಳಿಸುವ ಸಲುವಾಗಿ ಮೆಟ್ರೋ ರೈಲು ನಿಗಮ ರೈಲು ನಿಲ್ದಾಣಗಳಲ್ಲಿ ಸ್ಪಾ, ಸಲೂನ್ ಗಳ ತೆರೆಯಲು ಟೆಂಡರ್ ಕರೆದಿರುವ ಬೆನ್ನಲ್ಲೇ ಸ್ಪಾ, ಸಲೂನ್ ಗಳ ಬದಲಿಗೆ ರೆಸ್ಟೋರೆಂಟ್ ಮತ್ತು ಮೆಡಿಕಲ್ ಶಾಪ್ ಗಳನ್ನು ತೆರೆಯಬೇಕು ಎನ್ನುವ ಬೇಡಿಕೆ ಕೇಳಿಬಂದಿದೆ.
ಇತ್ತೀಚೆಗಷ್ಚೇ ಬೆಂಗಳೂರು ಮೆಟ್ರೋ ರೈಲು ನಿಗಮ ಬಿಎಂಆರ್ ಸಿಎಲ್ ನಗರದ ಪೂರ್ವ-ಪಶ್ಚಿಮ ಭಾಗದ ಪ್ರಮುಖ ಮೆಟ್ರೋ ರೈಲು ನಿಲ್ದಾಣಗಳಾದ ಬೈಯ್ಯಪ್ಪನಹಳ್ಳಿ, ಇಂದಿರಾನಗರ, ಟ್ರಿನಿಟಿ, ಎಮ್ ಜಿ ರಸ್ತೆ, ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಗಳಲ್ಲಿ ಸ್ಪಾ, ಸಲೂನ್, ಫಿಟ್ನೆಸ್ ಕೇಂದ್ರಗಳು, ಟ್ಯಾಟೂ ಸ್ಟುಡಿಯೊಗಳು, ಕಾಲ್ ಸೆಂಟರ್ ಗಳು ಮತ್ತು ಬಿಪಿಒಗಳು ಸೇರಿದಂತೆ ಇತರೆ ವಾಣಿಜ್ಯ ಕೇಂದ್ರಗಳನ್ನು ತೆರೆಯುವ ಸಲುವಾಗಿ ಟೆಂಡರ್ ಸಲ್ಲಿಸಲು ಆಹ್ವಾನ ನೀಡಿತ್ತು. ನಿಗಮದ ಈ ನಡೆಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಸಾರ್ವಜನಿಕರು ಸ್ಪಾ ಮತ್ತು ಸಲೂನ್ ಗಳ ಬದಲಿಗೆ ಮೆಡಿಕಲ್ ಶಾಪ್, ರೆಸ್ಟೋರೆಂಟ್ ಗಳನ್ನು ತೆರೆಯುವಂತೆ ಸಲಹೆ ನೀಡಿದ್ದಾರೆ.
ಬಿಎಂಆರ್ ಸಿಎಲ್ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ. ನಿಲ್ಗಾಣದಲ್ಲಿ ಸೂಚನಾ ಫಲಕಗಳ ಸಹಿತ ಶೌಚಾಲಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣ ಮಾಡಬೇಕಿದೆ. ಇದರಿಂದ ಪ್ರಯಾಣಿಕರು ಶೌಚಾಲಯಕ್ಕಾಗಿ ಅಲೆದಾಡುವ ಸಮಸ್ಯೆ ತಪ್ಪುತ್ತದೆ. ಇನ್ನು ನಿಲ್ದಾಣದ ಹೊರಗೆ ಸಾಕಷ್ಟು ಸ್ಪಾ ಮತ್ತು ಸಲೂನ್ ಗಳಿವೆ.. ಸ್ಪಾ ಮತ್ತು ಸಲೂನ್ ಗಾಗಿ ನಿಲ್ದಾಣಕ್ಕೆ ಬರುವ ಅವಶ್ಯಕತೆ ಇಲ್ಲ. ಅವುಗಳ ಬದಲಿಗೆ ಬೆಂಗಳೂರು ಒನ್ ಸೆಂಟರ್, ಮೆಡಿಕಲ್ ಶಾಪ್ ಗಳು, ಪ್ಲೇ ಸ್ಕೂಲ್, ಎಟಿಎಂ ಕೇಂದ್ರಗಳು ಮತ್ತು ಡೇ ಕೇರ್ ಸೆಂಟರ್ ಗಳನ್ನು ತೆರೆಯುವಂತೆ ಸಲಹೆ ನೀಡಲಾಗಿದೆ.
ಮತ್ತೆ ಕೆಲವು ಪ್ರಯಾಣಿಕರು ನಿಲ್ದಾಣದಲ್ಲಿ ವಿದ್ಯುತ್ ಮತ್ತು ನೀರಿ ಬಿಲ್ ಪಾವತಿ ಮಾಡುವ ಸಲುವಾಗಿ ಬಿಬಲ್ಯೂ ಎಸ್ ಎಸ್ ಬಿ ಮತ್ತು ಬೆಸ್ಕಾಂ ಕೇಂದ್ರಗಳನ್ನು ಸ್ಥಾಪಿಸುವಂತೆ ಹೇಳಿದ್ದಾರೆ. ನಿಲ್ದಾಣಗಳಲ್ಲಿ ಜೀವರಕ್ಷಕ ಔಷಧಿಗಳ ಔಷಧಾಲಯಗಳು ಇದ್ದರೆ, ಅಪಾಯದಲ್ಲಿರುವವರಿಗೆ ನೆರವಾದಂತೆ. ಹೀಗಾಗಿ ಔಷಧಾಲಯಗಳ ಸ್ಥಾಪನೆಗೆ ಪ್ರಾಮುಖ್ಯತೆ ನೀಡುವಂತೆ ಬಿಎಂಆರ್ ಸಿಎಲ್ ಗೆ ಸಲಹೆ ನೀಡಿದ್ದಾರೆ.
ದೊಡ್ಡ ಪಾರ್ಕಿಂಗ್ ಸ್ಥಳ ನಿರ್ಮಾಣ ಮಾಡುವ ಮೂಲಕ ಸಂಸ್ಥೆಯ ಆದಾಯ ಹೆಚ್ಚಿಸಬಹುದು
ರಚಿತ್ ತಿವಾರಿ ಎಂಬ ಪ್ರಯಾಣಿಕರು ಮೆಟ್ರೋ ರೈಲು ನಿಗಮ ನಿಲ್ದಾಣದಲ್ಲೇ ದೊಡ್ಡ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಮೆಟ್ರೋ ರೈಲು ಆರಂಭವಾದ ಬಳಿಕ ಸಾಕಷ್ಟು ಮಂದಿ ಸ್ನಂತ ವಾಹನಗಳನ್ನು ಪಾರ್ಕ್ ಮಾಡಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದರೆ ಸೂಕ್ತ ಎಂಬ ಸಲಹೆ ನೀಡಿದ್ದಾರೆ. ಇದರೊಂದಿಗೆ ಕೆಲ ಪ್ರಯಾಣಿಕರು ಔಷಧಾಲಯಗಳೊಂದಿಗೆ ಕ್ಲಿನಿಕ್ ಗಳನ್ನು ಆರಂಭಿಸಿದರೆ, ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ನೆರವಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಡಯಾನಾ ಎಂಬ ಪ್ರಯಾಣಿಕರು ನಿಲ್ದಾಣದಲ್ಲಿ ದಿನಸಿ ಆಂಗಡಿಗಳನ್ನು ತೆರಯಬೇಕು ಎಂದು ಹೇಳಿದ್ದು, ಇದರಿಂದ ನಿತ್ಯ ಮಾರುಕಟ್ಟೆಗೆ ಹೋಗುವ ಗೋಜು ತಪ್ಪುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಮೆಟ್ರೈ ರೈಲು ನಿಲ್ದಾಣದಲ್ಲಿ ಸ್ಪಾ ಮತ್ತು ಸಲೂನ್ ಗಾಗಿ ಟೆಂಡರ್ ಕರೆದಿರುವ ಬಿಎಂಆರ್ ಸಿಎಲ್ ಅವುಗಳ ಬದಲಿಗೆ ನಿಲ್ದಾಣದ ಮೂಲ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿ ರೆಸ್ಟೋರೆಂಟ್, ಔಷಧಾಲಯ ಮತ್ತು ಎಟಿಎಂ ಕೇಂದ್ರಗಳನ್ನು ತೆರಯಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics