ಬೆಂಗಳೂರು: ಬೆಂಗಳೂರಿನ ಯಲಹಂಕದ ಹುಣಸಮಾರನಹಳ್ಳಿಯಲ್ಲಿನ ಇತಿಹಾಸ ಪ್ರಸಿದ್ದ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎನ್ನಲಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿದ್ದು ಭಕ್ತರು ರೊಚ್ಚಿಗೆದಿದ್ದು ಮಠದ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮಠದ ಹಾಲಿ ಪೀಠಾಧಿಪತಿಯಾಗಿರುವ ಶೀವಾಚರ್ಯ ಸ್ವಾಮೀಜಿ ಅವರ ಬೆಂಬಲದೊಂದಿಗೆ ಪುತ್ರ ದಯಾನಂದ ಮಠದ ಕೋಣೆಯಲ್ಲೇ ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳ ವಿಡಿಯೋಗಳು ಬಹಿರಂಗಗೊಳ್ಳುತ್ತಿದ್ದಂತೆ ಭಕ್ತರು ರೊಚ್ಚಿಗೆದ್ದಿದ್ದು ಮಠದ ಮುಂದೆ ಹೋರಾಟಕ್ಕಿಳಿದಿದ್ದಾರೆ.
ಮಠದ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಠದ ಒಳಗೆ ಯಾರನ್ನು ಬಿಡಲಾಗುತ್ತಿಲ್ಲ. ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ಭಕ್ತರನ್ನು ಮಠದ ಒಳಗೆ ಬಿಡುತ್ತಿಲ್ಲ ಎಂದು ಚಿಕ್ಕಜಾಲ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮಠದ ಮುಂದೆ ಜಮಾಯಿಸಿರುವ ಭಕ್ತರು ಮಠದ ಸ್ವಾಮೀಜಿ ಹಾಗೂ ಅವರ ಪುತ್ರ ಕೂಡಲೇ ಮಠವನ್ನು ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಠದಲ್ಲಿ ಆಸ್ತಿ ವಿವಾದ ಮತ್ತು ಕೆಲವು ಆಂತರಿಕ ಸಮಸ್ಯೆಗಳು ಇವೆ. ಪ್ರಕರಣ ಸಂಬಂಧ ಮಹಿಳೆ ದೂರು ನೀಡಿದರೇ ಸ್ವಾಮೀಜಿ ಅವರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಿಡಿಯೋ ಟೇಪ್ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದು ಡಿಸಿಪಿ ಗಿರೀಶ್ ಎಸ್ ಹೇಳಿದ್ದಾರೆ.
ವೀರಶೈವ ಪೀಠಕ್ಕೆ ಶಿವಾಚಾರ್ಯ ಶ್ರೀಗಳು 2011ರಲ್ಲಿ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ದಯಾನಂದರನ್ನೇ ನೇಮಕಮಾಡಿಕೊಂಡಿದ್ದರು. ಆಗಲೂ ಸಹ ಮಠದ ಆಸ್ತಿಯ ಮೇಲಿನ ಆಸೆಯಿಂದ ಮಗನಿಗೆ ಪಟ್ಟಾಧಿಕಾರ ನೀಡಿದ್ದರೆನ್ನುವ ಆರೋಪ ಕೇಳಿಬಂದಿತ್ತು. ಇದೀಗ ರಾಸಲೀಲೆ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಭಕ್ತರು ಪೀಠಾಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.