ಮೈಸೂರು: ಕರ್ನಾಟಕ ಖ್ಚಾತ ಪ್ರವಾಸಿ ಕೇಂದ್ರ ಮೈಸೂರಿನ ಮೃಗಾಯಲಯಕ್ಕೆ ಚಿರತೆಯೊಂದು ನುಗ್ಗಿ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆ ಚಿರತೆಯನ್ನು ಮೃಗಾಲಯ ಸಿಬ್ಬಂದಿ ಸೆರೆ ಹಿಡಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಹೊತ್ತಿನಲ್ಲಿ ಚಿರತೆ ಚಾಮರಾಜೇಂದ್ರ ಮೃಗಾಲಯದ ಒಳಗೆ ನುಸುಳಿದ್ದು, ಇದೀಗ ಸತತ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೃಗಾಲಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮೃಗಾಲಯಕ್ಕೆ ಚಿರತೆ ನುಗ್ಗಿದ ವಿಚಾರ ತಿಳಿದ ಕೂಡಲೇ ಮೃಗಾಲಯದ ಆಡಳಿತ ಮಂಡಳಿ ಕೂಡಲೇ ಮೃಗಾಲಯದಿಂದ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಿದರು. ಅಲ್ಲದೆ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಬಳಿಕ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಚಿರತೆ ಅವಿತಿರುವ ಪ್ರದೇಶವನ್ನು ಕಂಡು ಹಿಡಿದರು. ಮರವೇರಿ ಕುಳಿತಿದ್ದ ಚಿರತೆಯನ್ನು ಸಿಬ್ಬಂದಿಗಳು ಅರವಳಿಕೆ ನೀಡಿ ಬಳಿಕ ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃಗಾಲಯದ ಅಧಿಕಾರಿಗಳು ಬಹುಶಃ ಚಾಮುಂಡಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಿಂದ ಚಿರತೆ ಆಕಸ್ಮಿಕವಾಗಿ ಮೃಗಾಲಯದೊಳಗೆ ಬಂದಿದೆ. ಪ್ರಸ್ತುತ ಚಿರತೆ ಸೆರೆಯಾಗಿದ್ದು, ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೆರಿ ಹಿಡಿಯಲಾದ ಚಿರತೆಯನ್ನು ಅರಣ್ಯಕ್ಕೆ ವಾಪಸ್ ಬಿಡಬೇಕೇ ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.