ನವದೆಹಲಿ: ಶೀಘ್ರದಲ್ಲೇ ಬೆಂಗಳೂರಿನಲ್ಲೂ ಮುಂಬೈ ಮಾದರಿಯ ಸಬ್ ಅರ್ಬನ್ ರೈಲುಗಳು ಓಡಲಿದ್ದು, ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು ಸೇವೆ ಒದಗಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಗೋಯಲ್ ಅವರು, ಬೆಂಗಳೂರಿಗೆ ಸಬ್ ಅರ್ಬಲ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು ಅನಂತ್ ಕುಮಾರ್ 1996ರಿಂದಲೇ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗೆ ನಾನು ರೈಲ್ವೆ ಸಚಿವನಾಗಿ ಅಧಿಕಾರ ವಹಿಸಿಕೊಳ್ಳು ಮುಂಚೆಯೇ ಮತ್ತೆ ಈ ಪ್ರಸ್ತಾಪ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ನೈರುತ್ಯ ರೈಲ್ವೇ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ನೈರುತ್ಯ ರೈಲ್ವೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದು, ರೈಲ್ವೇ ಜಾಲಕ್ಕೆ ಸಂಬಂಧಿಸಿ ನಗರದ ಸರ್ವೇ ನಡೆಸಿ ಪ್ರಾಥಮಿಕ ವರದಿ ನೀಡಲು ಅವರು ಸೂಚಿಸಿದ್ದಾರೆ. ಪ್ರಾಥಮಿಕ ವರದಿ ನೀಡಲು ಗೋಯಲ್ ಅಧಿಕಾರಿಗಳಿಗೆ 30 ದಿನಗಳ ಗಡುವು ನೀಡಿದ್ದಾರೆ.
ಸಬ್ ಅರ್ಬನ್ ರೈಲ್ವೆ ನಗರದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಕೈಗಾರಿಕೆಗಳು ಇರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವಂತಿರಬೇಕು ಎಂದು ಗೋಯಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.