ಬೆಂಗಳೂರು: ಬಹು ನಿರೀಕ್ಷಿತ ಈಶಾನ್ಯ ಮಾರುತಗಳು ಶುಕ್ರವಾರ ದಕ್ಷಿಣ ರಾಜ್ಯಗಳನ್ನು ಪ್ರವೇಶಿಸಿದ್ದು .ತಮಿಳುನಾಡು ಮತ್ತು ಕರ್ನಾಟಕ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ, ರಾಯಲಸೀಮಾ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿಗೆ ಈಶಾನ್ಯ ಮಾರುತಗಳು ಹಿಂಗಾರು ಮಳೆಯನ್ನು ಹೊತ್ತು ತರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಬಂಗಾಳ ಕೊಲ್ಲಿಯಿಂದ ತಮಿಳುನಾಡು, ಪುದುಚೇರಿ ಕರಾವಳಿಯ ಮೂಲಕ ದಕ್ಷಿಣ ರಾಜ್ಯಗಳನ್ನು ಪ್ರವೇಶಿಸಲಿರುವ ಈಶಾನ್ಯ ಮಾರುತಗಳು ಬಿರುಗಾಳಿ, ಗುಡುಗು ಸಹಿತ ಮಳೆ ಹೊತ್ತು ತರಲಿವೆ.
ಒಳನಾಡು ಕರ್ನಾಟಕ ಮತ್ತು ಕರಾವಳಿ ತೀರದಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಎರಡು ತಿಂಗಳ ಕಾಲ ಅಂದರೆ ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಭಾರೀ ಮಳೆ ಸುರಿಸಿ ಅಕ್ಟೋಬರ 25 ರಂದು ನಿರ್ಗಮಿಸಿದ್ದವು.
ಬಂಗಾಳ ಕೊಲ್ಲಿಯಿಂದ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, 188 ಎಂಎಂ ಮಳೆಯಾಗುವ ಸಾದ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಎಸ್ ಎಸ್ ಎಂ ಗವಾಸ್ಕರ್ ತಿಳಿಸಿದ್ದಾರೆ