ರಾಜ್ಯ

ಬೆಳಗಾವಿ: ಹುಟ್ಟೂರು ಖಾನಾಪುರದಲ್ಲಿ ತೆಲಗಿ ಅಂತ್ಯಕ್ರಿಯೆ

Sumana Upadhyaya
ಬೆಂಗಳೂರು/ಬೆಳಗಾವಿ: ಬಹುಕೋಟಿ ಛಾಪಾ ಕಾಗದ ಹಗರಣದ ರುವಾರಿ ಅಬ್ದುಲ್ ಕರೀಂ ತೆಲಗಿಯ  ಅಂತ್ಯಕ್ರಿಯೆ ಇಂದು ಹುಟ್ಟೂರು ಬೆಳಗಾವಿಯ ಖಾನಾಪುರದಲ್ಲಿ ನೆರವೇರಿತು. 
ಇಂದು ಬೆಳಗ್ಗೆ 10.30ರ ಸುಮಾರಿಗೆ ಅಂತಿಮ ಕ್ರಿಯಾ ವಿಧಿ ವಿಧಾನಗಳು ನಡೆಯುತ್ತಿರುವಾಗ ತೆಲಗಿ ಸೋದರ ಅಜೀಂ ತೆಲಗಿ ತನ್ನ ಅಣ್ಣನ ಅಂತಿಮ ದರ್ಶನ ಮಾಡಲು ಬಂದಿದ್ದರು.
ಈ ಸಂದರ್ಭದಲ್ಲಿ ಅಬ್ದುಲ್ ಕರೀಂ ಲಾಲ್ ತೆಲಗಿ ಪುತ್ರಿ ಸನಾ ತೆಲಗಿ ತನ್ನ ಚಿಕ್ಕಪ್ಪನ ಜೊತೆ ವಾಗ್ವಾದ ನಡೆಸಿದಳು. ತಮ್ಮ ತಂದೆ ತೀರಿಕೊಂಡ ಸಂದರ್ಭದಲ್ಲಿ ಬಾರದ್ದ ನೀವು ಈಗ ಏಕೆ ಬಂದಿರಿ ಎಂದು ಪ್ರಶ್ನಿಸಿದಳು. ಹೀಗಾಗಿ ಸ್ಥಳದಲ್ಲಿ ಕೆಲಹೊತ್ತು ವಾಗ್ವಾದ, ಗೊಂದಲದ ವಾತಾವರಣವುಂಟಾಯಿತು. ನಂತರ ಸೋದರ ಅಜೀಂ ತೆಲಗಿ ಸ್ಥಳದಿಂದ ಹೋದರು ಎಂದು ತಿಳಿದುಬಂದಿದೆ. 
ಇದಕ್ಕೂ ಮುನ್ನ ನಿನ್ನೆ ತೆಲಗಿ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಶವಪರೀಕ್ಷೆಯ ವಿಧಿ ವಿಧಾನಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಯಿತು. ಜೈಲಿನಲ್ಲಿರುವಾಗಲೇ ತೆಲಗಿ ತೀರಿಕೊಂಡಿದ್ದರಿಂದ ಶವಪರೀಕ್ಷೆ ವಿಧಿವಿಧಾನಗಳನ್ನು ಮುಗಿಸುವ ಹೊತ್ತಿಗೆ ತಡವಾಗಿತ್ತು. ತೆಲಗಿಯ ಪತ್ನಿ, ಪುತ್ರಿ ಮತ್ತು ಅಳಿಯ ದಿನಪೂರ್ತಿ ಆಸ್ಪತ್ರೆಯಲ್ಲಿ ಕಾದು ಕುಳಿತಿದ್ದರು.
ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮತ್ತು ಕಾರಾಗೃಹ ವಿಧಾಗದ ಅಧಿಕಾರಿಗಳ ಸಮ್ಮುಖದಲ್ಲಿ ನಿನ್ನೆ ಸಾಯಂಕಾಲ 4.30ಕ್ಕೆ ಶವಪರೀಕ್ಷೆ ನಡೆಯಿತು. ವಿಧಿ ವಿಧಾನ ಪ್ರಕಾರ ಇಡೀ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿತ್ತು. ಶವಪರೀಕ್ಷೆ ಸಾಯಂಕಾಲ 6 ಗಂಟೆ ಹೊತ್ತಿಗೆ ಮುಕ್ತಾಯವಾಯಿತು. ನಂತರ ಅವರ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಸಾಯಂಕಾಲ 7 ಗಂಟೆ ಸುಮಾರಿಗೆ ಬೆಂಗಳೂರು ತೊರೆದ ಕುಟುಂಬದವರು ಇಂದು ಬೆಳಗಾವಿಯ ಖಾನಾಪುರದ ತಮ್ಮ ಊರಿನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ.
ಖಾನಾಪುರದ ವಿದ್ಯಾನಗರದಲ್ಲಿರುವ ತೆಲಗಿ ಮನೆಗೆ ಮೃತದೇಹವನ್ನು ಕೊಂಡೊಯ್ಯಲಿದ್ದು ಇಂದು ಬೆಳಗ್ಗೆ 10.30ರ ಹೊತ್ತಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತೆಲಗಿಯ ಅಳಿಯ ಇರ್ಫಾನ್ ತಾಳಿಕೋಟೆ ತಿಳಿಸಿದ್ದಾರೆ.
SCROLL FOR NEXT