ಈ ವಿದೇಶಿಗನಿಗೆ ಕನ್ನಡವೇ ಮಾತೃಭಾಷೆ, ಮೈಸೂರಿನಲ್ಲಿರುವ ವಿದೇಶಿಗನ ಕನ್ನಡ ಪ್ರೀತಿ! 
ರಾಜ್ಯ

ಈ ವಿದೇಶಿಗನಿಗೆ ಕನ್ನಡವೇ ಮಾತೃಭಾಷೆ, ಮೈಸೂರಿನಲ್ಲಿರುವ ವಿದೇಶಿಗನ ಕನ್ನಡ ಪ್ರೀತಿ!

ಆಂಗ್ಲಭಾಷೆಯ ವ್ಯಾಮೋಹದಿಂದ ಕನ್ನಡಿಗರೇ ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ ಈ ವಿದೇಶಿಗ ಮಾತನಾಡುವ ಕನ್ನಡವನ್ನು ಕೇಳಿದರೆ, ಕನ್ನಡಿಗರೇ ನಾಚುವಂತಿದೆ...

ಮೈಸೂರು: ಆಂಗ್ಲಭಾಷೆಯ ವ್ಯಾಮೋಹದಿಂದ ಕನ್ನಡಿಗರೇ ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ ಈ ವಿದೇಶಿಗ ಮಾತನಾಡುವ ಕನ್ನಡವನ್ನು ಕೇಳಿದರೆ, ಕನ್ನಡಿಗರೇ ನಾಚುವಂತಿದೆ. 
ಬೆಲ್ಜಿಯಂನಲ್ಲು ಮೂಲದ ಹೆಂಡ್ರಿಕ್ ಹಾರ್ಡ್'ಮನ್ (52) ಇದೀಗ ಮೈಸೂರಿನಲ್ಲಿಯೇ ನೆಲೆಯೂರಿದ್ದಾರೆ. ಮೈಸೂರಿನಲ್ಲಿ ಕಳೆದ ಐದು ವರ್ಷಗಳಿಂದ ಹೆಂಡ್ರಿಕ್ ಅವರು ನೆಲೆಯೂರಿದ್ದು, ಸ್ವಚ್ಛವಾಗಿ ಕನ್ನಡವನ್ನು ಮಾತನಾಡುವುದನ್ನು ಹಾಗೂ ಬರೆಯುವುದನ್ನು ಕಲಿತಿದ್ದಾರೆ. ಇವರೊಂದಿಗೆ ಮಾತನಾಡಲು ಆರಂಭಿಸಿದರೆ, ಇವರ ತಾಯಿಭಾಷೆ ಕನ್ನಡವೇನೋ ಎಂಬಂತೆ ಮಾತನಾಡಲು ಆರಂಭಿಸುತ್ತಾರೆ. 
ಹೆಂಡ್ರಿಕ್ ಅವರು 1996ರಲ್ಲಿ ಪ್ರವಾಸಿಗನಾಗಿ ಬೆಂಗಳೂರಿಗೆ ಆಗಮಿಸಿದ್ದರು. ಬಳಿಕ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. 2001ರಲ್ಲಿ ಭಾರತದ ಮೊದಲ ಫಝಲ್ ಕಂಪನಿ ಆರಂಭಿಸಿದ ಹೆಂಡ್ರಿಕ್ ಅವರು, ವಿಶ್ವ ಫಝಲ್ ಫೆಡರೇಶನ್ ನಿರ್ದೇಶಕ ಮಂಡಳಿ ಸದಸ್ಯ ಹಾಗೂ ಭಾರತೀಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. 
7 ವರ್ಷಗಳಲ್ಲಿ ಕನ್ನಡದ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡ ಹೆಂಡ್ರಿಕ್ ಅವರು, ಯಾವುದೇ ರೀತಿಯ ತರಗತಿಗಳಿಗೆ ಹೋಗದೆಯೇ  ಸ್ವಚ್ಛ ಕನ್ನಡ ಮಾತನಾಡುವುದನ್ನು ಕಲಿತುಕೊಂಡಿದ್ದಾರೆ. ಕನ್ನಡ ಕಲಿಯಲು ನಿಘಂಟುಗಳೇ ಅವರಿಗೆ ಉತ್ತಮ ಶಿಕ್ಷಕರಂತೆ. ಯಾವುದೇ ಪದಗಳು ಅರ್ಥವಾಗದೇ ಹೋದರೂ, ನಿಘಂಟುಗಳ ಮೂಲಕ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಮುಂದಾಗುತ್ತಾರೆ. ಈ ಮೂಲಕ ಸ್ವಚ್ಛ ಕನ್ನಡ ಮಾತನಾಡುವುದನ್ನು ಹೆಂಡ್ರಿಕ್ ಅವರು ಕಲಿತುಕೊಂಡಿದ್ದಾರೆ. 
ಆರಂಭಿಕ ದಿನಗಳಲ್ಲಿ ಕನ್ನಡ ಕಲಿಯುವುದು ಸವಾಲಿನ ಕೆಲಸವಾಗಿತ್ತು. ಬೆಂಗಳೂರಿನಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ. ಇದರಲ್ಲಿ ಕನ್ನಡ ಭಾಷೆ ಯಾವುದು ಎಂಬುದನ್ನು ಗುರ್ತಿಸುವುದು ಕಷ್ಟವಾಗುತ್ತಿತ್ತು. ಕನ್ನಡ ಭಾಷೆಯನ್ನು ಗುರ್ತಿಸುವುದಕ್ಕೆ ಹಲವು ತಿಂಗಳುಗಳೇ ಬೇಕಾಯಿತು. ನಂತರ ಕನ್ನಡ ಪದಗಳನ್ನು ತಿಳಿದುಕೊಳ್ಳುವ ಸಲುವಾಗಿ ನಿಘಂಟೊಂದನ್ನು ಖರೀದಿ ಮಾಡಿದೆ. ಏಕವಚನ ಹಾಗೂ ಬಹುವಚನಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ನಂತರ ಸುಧೀರ್ಘವಾಗಿ ನಿಘಂಟನ್ನು ಅನುಸರಿಸಲು ಆರಂಭಿಸಿದ್ದೆ. ಬಳಿಕ ಕನ್ನಡ ಪದಗಳನ್ನು ಕಲಿತು ಅವುಗಳನ್ನು ಬಳಸಲು ಆರಂಭಿಸಿದ್ದೆ, ಸಾಧ್ಯವಾದಷ್ಟು ಕನ್ನಡದಲ್ಲಿಯೇ ಜನರೊಂದಿಗೆ ಮಾತನಾಡಲು ಆರಂಭಿಸಿದೆ. ಕೆಲ ದಿನಗಳ ಬಳಿಕ ಸೂಕ್ಷ್ಮ ವ್ಯತ್ಯಾಸಗಳು ನನಗೆ ಅರ್ಥವಾಗತೊಡಗಿತು ಎಂದು ಹೆಂಡ್ರಿಕ್ ಅವರು ಹೇಳಿದ್ದಾರೆ. 
ಬೆಂಗಳೂರು ಕಾಸ್ಮೋಪಾಲಿಟನ್ (ಸರ್ವರಾಷ್ಟ್ರ ಪ್ರೇಮಿ) ಸಿಟಿಯಾಗಿದೆ. ಅಲ್ಲಿರುವ ಜನರು ಹಲವು ಭಾಷೆಗಳಲ್ಲಿ ಮಾತನಾಡುತ್ತಾರೆ. ಕನ್ನಡ ಭಾಷೆಗೂ ಇತರೆ ಭಾಷೆಗಳಿಗೂ ಇರುವ ವ್ಯತ್ಯಾಸವನ್ನು ಅರಿಯುವುದು ಅತ್ಯಂತ ಕಷ್ಟವಾಗುತ್ತಿತ್ತು. ಬೆಂಗಳೂರಿನಲ್ಲಿ ತಿಂಗಳಾನುಗಟ್ಟಲೇ ಇದ್ದರೂ ಕನ್ನಡ ಕಲಿಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಅಲ್ಲಿ ಕನ್ನಡಕ್ಕಿಂತ ಬೇರೆ ಭಾಷೆ ಮಾತನಾಡುವವರೇ ಹೆಚ್ಚಾಗಿ ಇದ್ದಾರೆ. ನಾನು ಕನ್ನಡದಲ್ಲಿ ಮಾತನಾಡಿದರೂ ಕನ್ನಡದವರೇ ನನ್ನೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡುದ್ದಾರೆ. ಹಾಗಾಗಿ ಅಲ್ಲಿ ಕನ್ನಡ ಕಲಿಯಲು ನನಗೆ ಸಾಧ್ಯವಾಗದೆ 2012ರಲ್ಲಿ ಮೈಸೂರಿಗೆ ಬಂದಿದ್ದೆ. 
ನಾನು ಕನ್ನಡದಲ್ಲಿ ಮಾತನಾಡುವುದನ್ನು ನೋಡಿ ಹಲವು ಮಂದಿ ಆಶ್ಚರ್ಯಪಟ್ಟಿದ್ದಾರೆ. ಕೆಲವರು ನಾನು ವಿದೇಶಿಗನೆಂದು ಇಂಗ್ಲೀಷ್ ನಲ್ಲಿ ಮಾತನಾಡಲು ಆರಂಭಿಸುತ್ತಾರೆ. ಈ ವೇಳೆ ನಾನು ಕನ್ನಡದಲ್ಲಿ ಮಾತನಾಡಿದಾಗ ಆಶ್ಚರ್ಯದಲ್ಲಿ ನೋಡಿ, ವಿದೇಶಿಗನೆಂದು ತಿಳಿದು ಇಂಗ್ಲೀಷ್ ನಲ್ಲಿ ಮಾತನಾಡಿದ್ದೆವು ಎಂದು ಹೇಳಿ ಕ್ಷಮೆ ಹೇಳುತ್ತಾರೆ ಎಂದು ತಿಳಿಸಿದ್ದಾರೆ. 
ಹೆಂಡ್ರಿಕ್ ಅವರು ಕನ್ನಡ ಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಜಯಂತ್ ಕಾಯ್ಕಿಣಿ, ಪಿ. ಲಂಕೇಶ್ ಹಾಗೂ ಇನ್ನಿತರರು ಬರೆದಿರುವ ಪುಸ್ತಕಗಳನ್ನು ಓದಿದ್ದು, ಕೃಷ್ಣಗೌಡನ ಆನೆ ಹಾಗೂ ಕಿರಗೂರಿನ ಗಯ್ಯಾಳಿಗಳು ಇವರಿಗೆ ಇಷ್ಟವಾದ ಸಣ್ಣ ಕಥೆಗಳಾಗಿವೆ. ಹೆಂಡ್ರಿಕ್ ಅವರು ಹವ್ಯಾಸಿ ಭಾಷಾಂತರಿಯಾಗಿದ್ದು, ಅಂತರ್ಜಾಲದಲ್ಲಿ ಕೆಲಸ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. 
ಅತ್ಯಂತ ಸುಂದರವಾದ ಭಾಷೆ ಕನ್ನಡವನ್ನು ಮಾತನಾಡಲು ಕೆಲವು ಹಿಂಜರಿಯುತ್ತಾರೆ. ಕನ್ನಡ ಮಾತನಾಡುವುದರಿಂದ ಎಲ್ಲಿ ತಮ್ಮ ಘನತೆ ಹಾಳಾಗುತ್ತದೆಯೋ ಎಂದು ಮಾತನಾಡಲು ಹಿಂಜರಿಯುತ್ತಿದ್ದಾರೆ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾತನಾಡುವಂತೆ ಒತ್ತಡ ಹೇರುತ್ತಿರುವುದನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ಮೊದಲು ಒಬ್ಬ ವ್ಯಕ್ತಿ ತನ್ನ ತಾಯಿಭಾಷೆಯನ್ನು ಕಲಿಯಬೇಕು. ನಂತರ ಯಾವುದೇ ಭಾಷೆಯನ್ನು ಬೇಕಾದರೂ ಕಲಿಯಲಿ ಎಂದು ಹೆಂಡ್ರಿಕ್ ಹೇಳಿದ್ದಾರೆ. 
12ನೇ ವಿಶ್ವ ಸುಡೊಕು ಚಾಂಪಿಯನ್ ಶಿಪ್ ಮತ್ತು 26ನೇ ವಿಶ್ವ ಫಝರ್ ಚಾಂಪಿಯನ್ ಶಿಪ್ ನ್ನು ಅ.15 ಮತ್ತು ಅ.21 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೆಂಡ್ರಿಕ್ ಅವರು ಕಾರ್ಯಕ್ರಮಕ್ಕೆ ಬಂದಿದ್ದ ವಿದೇಶಿಗರಿಗೆ ಪುಸ್ತಕಗಳನ್ನು ವಿತರಿಸಿದ್ದರು. ಈ ಪುಸ್ತಕದಲ್ಲಿ ಕನ್ನಡದ ಅಕ್ಷರಗಲು ಹಾಗೂ ಸಾಮಾನ್ಯವಾಗಿ ಬಳಸುವ ಕನ್ನಡ ಪಗಳು ಸೇರಿದಂತೆ ಹೆಂಡ್ರಿಕ್ ಅವರು ಕನ್ನಡ ಪದಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಭಾಷಾಂತರ ಮಾಡಿರುವುದು ಕಂಡು ಬಂದಿದೆ. 
ಹೆಂಡ್ರಿಕ್ ಅವರು ಯೂರೋಪಿನ್ ದೇಶಗಳಿಗೂ ಭೇಟಿ ನೀಡಿದ್ದು, ಇವರಿಗೆ ಡಚ್, ಜರ್ಮನ್, ಫ್ರೆಂಚ್ ಹಾಗೂ ಸ್ವೆಡೀಷ್ ಸೇರಿದಂದೆ ಇತರೆ ಭಾಷೆಗಳೂ ಕೂಡ ತಿಳಿದಿದೆ. ಕನ್ನಡದ ಮೇಲೆ ವ್ಯಾಮೋಹ ಹಾಗೂ ಪ್ರೀತಿಯನ್ನು ಬೆಳೆಸಿಕೊಂಡಿರುವ ಇವರು ತಮಿಳು ಹಾಗೂ ತೆಲಗು ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. 
'ಮಾತಾಡೋಕೆ ಮತ್ತು ಕೆಳೋಕೆ ಕನ್ನಡ ತುಂಬಾ ಚಂದ ಭಾಷೆ' ಎಂದು ಹೆಂಡ್ರಿಕ್ ಹಾರ್ಡ್'ಮನ್ ಹೇಳಿದ್ದಾರೆ. ಕನ್ನಡ ಭಾಷೆ ಮೇಲೆ ಅಪಾರವಾದ ಪ್ರೀತಿ ಬೆಳೆಸಿಕೊಂಡಿರುವ ಅವರು, ಕನ್ನಡ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಮಕ್ಕಳಿಗಾಗಿ 'ಸಾಹಸ ಪುಸ್ತಕ'ಗಳನ್ನು ಬರೆಯಲು ಚಿಂತನೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿ ಜಯಂತ್ ಕಾಯ್ಕಿಣಿಯವರ ಸಣ್ಣ ಕಥೆಗಳನ್ನು ಡಚ್ ಭಾಷೆಯಲ್ಲಿ ಭಾಷಾಂತರ ಮಾಡುವಲ್ಲಿ ಹೆಂಡ್ರಿಕ್ ಅವರು ಕಾರ್ಯನಿರತರಾಗಿದ್ದಾರೆ. 
ಇನ್ನು ಹೆಂಡ್ರಿಕ್ ಅವರು ವಿದೇಶಿಗರೇ ಆಗಿದ್ದರು, ನಮ್ಮ ನಾಡಿನ ಪ್ರಮುಖ ಆಹಾರ ಪದಾರ್ಥಗಳಾದ ರಾಗಿ ಮುದ್ದೆ, ಇಡ್ಲಿ ವಡೆ, ಹಾಗೂ ತೆಂಗಿನ ಕಾಯಿ ಚಟ್ನಿಯನ್ನು ಬಹಳ ಇಷ್ಟಪಡುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT