ಬೆಂಗಳೂರು: ಲೈನ್ ಮ್ಯಾನ್'ಗೆ ಪವರ್ ಮ್ಯಾನ್ ಗಳೆಂದು ಆಂಗ್ಲಭಾಷೆಯಲ್ಲಿ ನಾಮಕರಣ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಆಕ್ಷೇಪ ವ್ಯಕ್ತಡಪಡಿಸಿದರು.
ಇಂಧನ ಇಲಾಖೆ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 'ಪವರ್ ಅವಾರ್ಡ್ಸ್' ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೋ ಕಾಲದಲ್ಲಿ ಮಾರ್ಗದಾಳುಗಳಿಗೆ ಆಂಗ್ಲಭಾಷೆಯಲ್ಲಿ ಲೈನ್ ಮನ್ ಗಳಾಗಿ ನಾಮಕರಣ ಮಾಡಲಾಗಿದೆ. ಈಗಲೂ ಆಂಗ್ಲಭಾಷೆಯಲ್ಲಿ ನಾಮಕರಣ ಮಾಡುವುದು ಬೇಡ ಎಂದಿದ್ದಾರೆ.
ಬಳಿಕ ಕನ್ನಡ ಮೇಲಿರುವ ತಮ್ಮ ಭಾಷಾಭಿಮಾನವನ್ನು ತೋರಿಸಿರುವ ಅವರು, ಕನ್ನಡದಲ್ಲಿಯೇ ಲೈನ್ ಮ್ಯಾನ್ ಗಳಿಗೆ ಹೊಸ ಹೆಸರನ್ನು ಸೂಚಿಸಿದರು. ಪವನ್ ಮ್ಯಾನ್ ಗಳ ಬದಲಾಗಿ 'ಶಕ್ತಿ ಮಿತ್ರರು ಎಂದು ಹೆಸರಿಡುವಂತೆ ಸಲಹೆ ನೀಡಿದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಮಂದಿ ಸಿದ್ದರಾಮಯ್ಯ ಅವರಿಗೆ ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿರುವ ಬೆಸ್ಕಾಂ ಉದ್ಯೋಗಿ ಮಹಾದೇವ್ ಎಂಬುವದು, ಒಬ್ಬ ಕನ್ನಡಿಗನಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿರುವ ಕನ್ನಡ ಪದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಬಿಡದಿಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಶಿವಾನಂದ ಪಾಟೀಲ್ ಅವರು ಮಾತನಾಡಿ, ಸಾಕಷ್ಟು ನವೀನ ಪರಿಕಲ್ಪನೆಗಳೊಂದಿಗೆ ಇದೇ ಮೊದಲ ಬಾರಿಗೆ ಇಂಧನ ಇಲಾಖೆ ಸಿಬ್ಬಂದಿಗಳಿಗಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.