ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಗೆ ಸಿದ್ದಗಂಗಾ ಶ್ರೀಗಳು ಮತ್ತು ಸುತ್ತೂರು ಶ್ರೀಗಳು ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮಾಜದ ಒಳಿತಿಗಾಗಿ ನಡೆಯುವ ಸಮಷ್ಟಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಬಸವ ತತ್ವ ಬಿಟ್ಟು ನಮಗೆ ಅಸ್ತಿತ್ವ ಇಲ್ಲ. ಬಸವ ಬೇರೆಯಲ್ಲ, ಯಡಿಯೂರು ಸಿದ್ದಲಿಂಗ ಬೇರೆಯಲ್ಲ ಎಂಬ ಅಭಿಪ್ರಾಯವನ್ನು ಸಿದ್ದಗಂಗಾ ಕಿರಿಯ ಶ್ರೀಗಳು ವ್ಯಕ್ತಪಡಿಸಿದ್ದಾರೆ ಎಂದು ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಸಮಿತಿ ಸಂಚಾಲಕ ಎಸ್.ಎಂ. ಜಾಮದಾರ ಹೇಳಿದ್ದಾರೆ.
ವೀರಶೈವರು ಬಸವ ತತ್ವ ಒಪ್ಪಿಕೊಂಡರೇ ಶೇ. 90 ರಷ್ಟು ಸಮಸ್ಯೆ ಬಗೆಹರಿದಂತೆ, ಯಾವ ಹೆಸರಿಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕು ಎಂಬುದನ್ನು ನಂತರ ಚರ್ಚಿಸಬಹುದು ಎಂದು ಜಾಮದಾರ ತಿಳಿಸಿದ್ದಾರೆ.
ಇನ್ನೂ ತಮ್ಮ ಹೋರಾಟಕ್ಕೆ ದುಬೈ ಮತ್ತು ಅಮೆರಿಕಾ ನಿವಾಸಿಗಳ ಬೆಂಬಲವು ಕೂಡ ವ್ಯಕ್ತ ವಾಗಿದೆ ಎಂದು ಹೇಳಿರುವ ಅವರು, ನಾವು ಹಿಂದುಗಳ ವಿರೋಧಿಗಳಲ್ಲ, ನಾವು ಸ್ವಲ್ಪ ಭಿನ್ನ ಎಂದು ಹೇಳುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿರುವ ಪಂಚ ಪೀಠಾಧ್ಯಕ್ಷರು ಹಾಗೂ ವೀರಶೈವ ಸಮುದಾಯದ ಮುಖಂಡರು ದಾಖಲೆಗಳ ಸಹಿತ ಚರ್ಚೆಗೆ ಬರುವುದಾದರೆ ನಾವು ಸಹ ಅಗತ್ಯ ದಾಖಲೆಗಳನ್ನು ಮುಂದಿಟ್ಟು ಮುಕ್ತವಾಗಿ ಚರ್ಚಿಸಲು ಸಿದ್ಧ. ಅವರು ವಾಸ್ತವಿಕ ಹಾಗೂ ಸಾಮಾಜಿಕ ಸಂಗತಿಗಳಿಗೆ ಒತ್ತು ನೀಡಿ ಚರ್ಚೆ ಮಾಡಬೇಕು ಎಂದು ಹೇಳಿರುವ ಅವರು, ಯಾವುದೇ ಲಿಂಗಾಯತ ಮಠದ ಸ್ವಾಮಿಗಳ ಭೇಟಿ ನಡೆಸಿಲ್ಲ, ಆದರೆ ಈಗ ಅವರು ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics