

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಅದ್ಧೂರಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿ ಮೈಸೂರು ದಸರಾವನ್ನು ಮತ್ತಷ್ಟು ಆಕರ್ಷಕವಾಗಿಸಲು ನಗರದ ರಸ್ತೆಗಳಿಗೆ ಒಟ್ಟು 146 ಕಿ.ಮೀ. ಭವ್ಯ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಶುಕ್ರವಾರ ತಿಳಿಸಿದ್ದಾರೆ.
ಮೈಸೂರು ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳಿಗೆ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ದೀಪಾಲಂಕಾರ ವ್ಯವಸ್ಥೆ ಅಕ್ಟೋಬರ್ 11ರಿಂದ ಅಕ್ಟೋಬರ್ 31ರವರೆಗೆ ಒಟ್ಟು 21 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಈ ಬಾರಿ ದಸರಾ ದೀಪಾಲಂಕಾರದ ಜೊತೆಗೆ 3,500 ಎಲ್‌ಇಡಿ ಡ್ರೋನ್‌ಗಳನ್ನು ಬಳಸಿ ನಾಲ್ಕು ದಿನ ವಿಶೇಷ ಡ್ರೋನ್ ಪ್ರದರ್ಶನ ಆಯೋಜಿಸಲು ಯೋಜಿಸಲಾಗಿದೆ. ಅಕ್ಟೋಬರ್ 17, 18, 20 ಮತ್ತು 21ರಂದು ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನ ನಡೆಯಲಿದೆ.
3,500 ಡ್ರೋನ್‌ಗಳನ್ನು ಏಕಕಾಲದಲ್ಲಿ ಬಳಸಿಕೊಂಡು ರಾಷ್ಟ್ರಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಆಕಾಶದಲ್ಲಿ ಮೂಡಿಸಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವ ಯೋಜನೆಯೂ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.
ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ; ಕರ್ನಾಟಕದ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ದೇಶ-ವಿದೇಶಕ್ಕೆ ಪರಿಚಯಿಸುವ ದೊಡ್ಡ ವೇದಿಕೆಯಾಗಿದೆ. ಈ ಬಾರಿ ದೀಪಾಲಂಕಾರವನ್ನು ಮತ್ತಷ್ಟು ವಿಶಾಲ ಮತ್ತು ಆಕರ್ಷಕವಾಗಿ ರೂಪಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪ್ರತಿಕೃತಿಗಳೊಂದಿಗೆ ಡ್ರೋನ್ ಪ್ರದರ್ಶನವೂ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.