ಗೌರಿ ಲಂಕೇಶ್ (ಸಂಗ್ರಹ ಚಿತ್ರ)
ಬೆಂಗಳೂರು: ತಮ್ಮ ನಿವಾಸದ ಮುಂದೆ ದುಷ್ಕರ್ಮಿಗಳಿಂದ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ದಲಿತ ಪರ, ಬಡವರ ಪರ ಹಾಗೂ ಎಡಪಂಥೀಯ ಧೋರಣೆ ಹೊಂದಿದ್ದರು.
ಕನ್ನಡ ಪತ್ರಿಕೋದ್ಯಮದ ಕೆಲವು ಮಹಿಳಾ ಸಂಪಾದಕರುಗಳ ಪೈಕಿ ಕಠೋರ ಕಾರ್ಯಕರ್ತೆಯಾಗಿದ್ದು ನಕ್ಸಲ್ ಪರ ಮತ್ತು ಎಡಪಂಥೀಯ ನಿಲುವುಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು.
1962ರಲ್ಲಿ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ಪಿ.ಲಂಕೇಶ್ ಅವರ ಮಗಳಾಗಿ ಗೌರಿ ಲಂಕೇಶ್ ಹುಟ್ಟಿದರು. ಅವರ ಸೋದರ, ಸೋದರಿಯರಾದ ಇಂದ್ರಜಿತ್ ಲಂಕೇಶ್ ಮತ್ತು ಕವಿತಾ ಲಂಕೇಶ್ ಸಿನಿಮಾರಂಗದಲ್ಲಿ ಜನಪ್ರಿಯರು. ಲಂಕೇಶ್ ಪತ್ರಿಕೆಯನ್ನು ಪಿ.ಲಂಕೇಶ್ ಅವರು ಹುಟ್ಟುಹಾಕಿದ್ದರು. ತಮ್ಮ ಸೋದರ ಮತ್ತು ಪತ್ರಿಕೆಯ ಮಾಲೀಕ ಮತ್ತು ಪ್ರಕಾಶಕ ಇಂದ್ರಜಿತ್ ಲಂಕೇಶ್ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಲಂಕೇಶ್ ಪತ್ರಿಕೆ ಯನ್ನು ತೊರೆದು 2005ರಲ್ಲಿ ಗೌರಿ ಲಂಕೇಶ್ ತಮ್ಮದೇ ಕನ್ನಡ ಟ್ಯಾಬ್ಲಾಯ್ಡ್ 'ಗೌರಿ ಲಂಕೇಶ್ ಪತ್ರಿಕೆ'ಯನ್ನು ಆರಂಭಿಸಿದ್ದರು.
2008, ಜನವರಿ 23ರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ತಮ್ಮ ವಿರುದ್ಧ ಮಾನಹಾನಿಯನ್ನುಂಟುಮಾಡುವ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿಯ ಪದಾಧಿಕಾರಿ ಉಮೇಶ್ ಜೋಶಿ ದಾಖಲಿಸಿದ್ದ ಮಾನಹಾನಿ ಕೇಸಿಗೆ ಸಂಬಂಧಪಟ್ಟಂತೆ ಹುಬ್ಬಳ್ಳಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ಕಳೆದ ವರ್ಷ ಗೌರಿ ಲಂಕೇಶ್ ಅವರನ್ನು ಅಪರಾಧಿ ಎಂದು ಸಾಬೀತುಪಡಿಸಿತ್ತು.
ಸಮಾಜದ ಮುಖ್ಯ ವಾಹಿನಿಗೆ ಮರಳಲು ಯತ್ನಿಸುತ್ತಿದ್ದ ನಕ್ಸಲೀಯರ ಪುನರ್ವಸತಿಗಾಗಿ ಗೌರಿ ಲಂಕೇಶ್ ಕೆಲಸ ಮಾಡುತ್ತಿದ್ದರು. ರಾಜ್ಯದಲ್ಲಿ ಸಿಟಿಜೆನ್ಸ್ ಇನಿಷಿಯೇಟಿವ್ ಫಾರ್ ಪೀಸ್ ಸ್ಥಾಪನೆಯಲ್ಲಿ ಗೌರಿ ಲಂಕೇಶ್ ಭಾಗಿಯಾಗಿದ್ದರು.