ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಎರಡು ದಿನಕಳೆದರೂ ಪೊಲೀಸರಿಗಾಗಲಿ ಅಥವಾ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕಾಗಲೀ ಹಂತಕನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
ಐಜಿಪಿ ಬಿ.ಕೆ ಸಿಂಗ್ ನೇತೃತ್ವದ ತಂಡ, ಗುರುವಾರ ರಾಜ ರಾಜೇಶ್ವರಿ ನಗರದ ಗೌರಿ ಲಂಕೇಶ್ ನಿವಾಸಕ್ಕೆ ತೆರಳಿ ಮಾಹಿತಿ ಕಲೆ ಹಾಕಿದೆ. ಹತ್ಯೆಯ ಹಿಂದಿನ ಉದ್ದೇಶವೇನು, ಯಾರು ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ,
ತನಿಖೆಗೆ ಆಧಾರವಾಗಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಿಂದ ಕೂಡ ಯಾವುದೇ ಪ್ರಯೋಜನವಾಗಿಲ್ಲ,ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿ ಆಕೆಗೆ ಶೂಟ್ ಮಾಡಿದ್ದಾನೆ. ಆದರೆ ದೃಶ್ಯಾವಳಿಯಲ್ಲಿ ಆತನ ಮುಖ, ಯಾವ ವಾಹನದಲ್ಲಿ ಬಂದಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಹೀಗಾಗಿ ಬೇರೆ ಬೇರೆ ಸ್ಥಳಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಕೂಡ ಸಂಗ್ರಹಿಸಲಾಗಿದೆ.
ಈ ಪ್ರಕರಣ ಬಹು ದೊಡ್ಡ ಸವಾಲಾಗಿದೆ, ಹತ್ಯೆಯಲ್ಲಿ ಎಷ್ಟು ಮಂದಿ ಭಾಗವಹಿಸಿದ್ದರು ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ, ಖಾಲಿಯಾಗಿರುವ ಕಾಟ್ರಿಜ್ಡ್ ಬಿಟ್ಟರೆ ಹತ್ಯೆ ನಡೆದ ಸ್ಥಳದಲ್ಲಿ ತನಿಖೆಗೆ ಸಹಾಯವಾಗುವ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಲ್ಬುರ್ಗಿ ಪ್ರಕರಣಕ್ಕಿಂತ ಮತ್ತಷ್ಟು ಜಟಿಲವಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಗೌರಿ ಲಂಕೇಶ್ ಅವರ ನಿವಾಸದಿಂದ ಡೈರಿ ಮತ್ತು ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗುತ್ತಿದೆ,.ತುಂಬಾ ಹತ್ತಿರದಿಂದ ಶೂಟ್ ಮಾಡಿದ ಪರಿಣಾಮ ಗೌರಿ ಅವರ ದೇಹದಲ್ಲಿ ನಾಲ್ಕು ಗುಂಡುಗಳು ಹೊಕ್ಕಿದ್ದವು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದು ಬಂದಿದೆ. ಬುಲೆಟ್ ನಿಂದಾದ ಗಾಯದಿಂದಾಗಿ ಆಕೆಯ ಹೃದಯಕ್ಕೆ ಹಾನಿಯಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಒಂದು ಗುಂಡು ಮಿಸ್ ಆಗಿ ಗೋಡೆಗೆ ತಗುಲಿದೆ ಎಂದು ಹೇಳಿದ್ದಾರೆ.