ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಳೆಯ ನಡುವೆಯೇ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು
ಬೆಂಗಳೂರು: ರಾಜ್ಯ ಸರ್ಕಾರ ಮಾಸಿಕ 3000 ರೂ. ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಎರಡು ದಿನಗಳ ಮುಷ್ಕರವನ್ನು ಶುಕ್ರವಾರ ರಾತ್ರಿ ಅಂತ್ಯಗೊಳಿಸಿದ್ದಾರೆ.
ಔಷಧ ನಿಯಂತ್ರಣಾಲಯ ಕಚೇರಿಯಲ್ಲಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಸತತ ಎರಡು ತಾಸು ಸಂಧಾನ ಸಭೆ ನಡೆಸಿದರು. ಸರ್ಕಾರ 3000 ರೂ. ನೀಡುವುದಾಗಿ ಹೇಳಿದರೆ, ಕಾರ್ಯಕರ್ತೆಯರು 6000 ರೂ.ಗಳಿಗೆ ಪಟ್ಟುಹಿಡಿದರು. ಅಂತಿಮವಾಗಿ ಸರ್ಕಾರ 3000 ನೀಡುವುದಾಗಿ ಹೇಳಿತು. ಇದಕ್ಕೆ ಸಮ್ಮತಿಸಿದ ಕಾರ್ಯಕರ್ತೆಯರು ಮುಷ್ಕರ ಹಿಂಪಡೆಯಲು ಒಪ್ಪಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ : "ಆರೋಗ್ಯ ಸಚಿವರು ಎಲ್ಲಾ ಆಶಾ ಕಾರ್ಮಿಕರಿಗೆ 3000 ಮಾಸಿಕ ವೇತನವನ್ನು ರಾಜ್ಯ ನಿಧಿಯಿಂದ ನೀಡುವುದಾಗಿ ಖಾತ್ರಿಪಡಿಸಿದ್ದಾರೆ. ಇದಲ್ಲದೆ ಆಶಾ ಗಳು ಅವರ ಕಾರ್ಯಕ್ಷಮತೆ ಪ್ರೋತ್ಸಾಹಕಗಳ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ) ನಿಧಿಯನ್ನು ಪಡೆಯಬಹುದು" ಎಂದು ವಿವರಿಸಿದರು.
ಸಚಿವ ರಮೇಶ್ ಕುಮಾರ್ ಮಾತನಾಡಿ "ಯಾವುದೇ ರಾಜ್ಯವು ಈ ರೀತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಂಬಳ ಒದಗಿಸುತ್ತಿಲ್ಲ.ತೆಲಂಗಾಣ ಸಹ ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆಯ ಆಧಾರದಲ್ಲಿ ಅವರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಸಂಬಳದಲ್ಲಿ ಹೆಚ್ಚಳ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಕಳೆದ ಎರಡು ದಿನಗಳ ಅವಧಿಯಲ್ಲಿ ಫ್ರೀಡಮ್ ಪಾರ್ಕ್ ನಲ್ಲಿ ಸ್ಥಿರ ಮಾಸಿಕ ವೇತನಕ್ಕಾಗಿ ಬೇಡಿಕೆ ಇಟ್ಟು ಸುಮಾರು 15,000 ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳೊಂದಿಗೆ ಮಳೆ ಮತ್ತು ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ತೊಡಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos