ರಾಜ್ಯ

ಬೆಂಗಳೂರಿನಲ್ಲಿ 'ರ್ಯಾಲಿ ಫಾರ್ ರಿವರ್ಸ್' ಅಭಿಯಾನ; ಸರ್ಕಾರದಿಂದ ಬೆಂಬಲ ಘೋಷಣೆ

Sumana Upadhyaya
ಬೆಂಗಳೂರು: ಧಾರ್ಮಿಕ ಮುಖಂಡ ಜಗ್ಗಿ ವಾಸುದೇವ ನೇತೃತ್ವದಲ್ಲಿ  ನದಿಗಳ ಸಂರಕ್ಷಣೆಗಾಗಿ ದೇಶಾದ್ಯಂತ ನದಿಗಳ ದಡದಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರ್ನಾಟಕ ಸರ್ಕಾರದಿಂದ ಉತ್ತಮ ಬೆಂಬಲ ಸಿಕ್ಕಿದೆ. ಸದ್ಗುರು ಎಂದು ಕರೆಯಲ್ಪಡುವ ಜಗ್ಗಿ ವಾಸುದೇವ ಅವರು ಈ ಅಭಿಯಾನದ ಭಾಗವಾಗಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ 16 ರಾಜ್ಯಗಳಲ್ಲಿ 23 ನಗರಗಳಲ್ಲಿ ನದಿಗಳನ್ನು ಸಂರಕ್ಷಿಸುವ ಅಭಿಯಾನ ಕೈಗೊಂಡಿದ್ದಾರೆ.
ನಿನ್ನೆ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರ್ಯಾಲಿ ಫಾರ್ ರಿವರ್ಸ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಸಚಿವರುಗಳಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ನಟ ಪುನೀತ್ ರಾಜ್ ಕುಮಾರ್ ಮತ್ತು ಮೈಸೂರು ರಾಜಮನೆತನದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರು, ಶತಮಾನದ ಹಿಂದೆ ಬೆಂಗಳೂರಿನಲ್ಲಿ ಸುಮಾರು ಸಾವಿರ ಸರೋವರಗಳಿದ್ದವು. ಆದರೆ ಇಂದು ಬೆಂಗಳೂರು ಸುತ್ತಮುತ್ತ ಇರುವ ಸರೋವರಗಳ ಸಂಖ್ಯೆ ಕೇವಲ 81. ನೀರು ಮತ್ತು ಮಣ್ಣು ಈ ದೇಶದ ಜೀವಾಳ ಎಂಬುದನ್ನು ನಾವು ಮರೆಯಬಾರದು. ಯಾವುದಾದರೊಂದು ಅಭಿವೃದ್ಧಿ ಯೋಜನೆ ಕೈಗೊಂಡಾಗ ಅದಕ್ಕೆ ಸಂದೇಹ  ಮತ್ತು ವಿರೋಧ ವ್ಯಕ್ತಪಡಿಸುತ್ತಾರೆ. ತಮ್ಮ ರ್ಯಾಲಿ ಫಾರ್ ರಿವರ್ಸ್ ನ್ನು ವಿರೋಧಿಸುವವರು ಕೂಡ ಇದ್ದಾರೆ. ಆದರೆ ನದಿಗಳ ನೀರಿನ ಸಂರಕ್ಷಣೆಗೆ ಯಾರಾದರೂ ಪರಿಹಾರ ಕಂಡುಹಿಡಿಯಲಿ ಎಂದು ಹೇಳಿದರು.
ಈ ಅಭಿಯಾನ ಸಂಕೀರ್ಣವಾಗಿದ್ದು, ಇದರ ಫಲಿತಾಂಶ ಸಿಗಬೇಕೆಂದರೆ 25 ವರ್ಷಗಳ ಕಾಲ ಕಾಯಬೇಕು. ಆಗ ಗಮನಾರ್ಹ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಯಾನವನ್ನು ಶ್ಲಾಘಿಸಿ ಮಾತನಾಡಿ, ಇದು ಯಶಸ್ವಿಯಾಗಿ ಕೊನೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದರು. ನಾವು ಜಲ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ನೀರಿನ ಬಿಕ್ಕಟ್ಟು ಎದುರಿಸಲಿದೆ. ನಮ್ಮಲ್ಲಿ ಸರಿಯಾದ ನೀರಿನ ನಿರ್ವಹಣೆ ವ್ಯವಸ್ಥೆಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸದ್ಗುರು ಮುಂದೆ ಚೆನ್ನೈಗೆ ತೆರಳಲಿದ್ದಾರೆ. ಅವರ ಅಭಿಯಾನ ಅಕ್ಟೋಬರ್ 2ರಂದು ದೆಹಲಿಯಲ್ಲಿ ಮುಕ್ತಾಯಗೊಳ್ಳಲಿದೆ.
SCROLL FOR NEXT