ಬೆಂಗಳೂರು: ನಾಲ್ಕು ಹೈ ಪ್ರೊಫೈಲ್ ಮರ್ಡರ್ ಪ್ರಕರಣಗಳನ್ನು 4 ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಕರ್ನಾಟಕದ ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ, ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಪ್ರಕರಣಗಳು ಪೊಲೀಸರ ನಿದ್ದೆ ಗೆಡಿಸಿವೆ.
ಈ ನಾಲ್ಕು ಪ್ರಕರಣಗಳಲ್ಲೂ ತನಿಖಾ ತಂಡಗಳಿಗೆ ಒಂದೇ ರೀತಿಯ ಸವಾಲು ಎದುರಾಗಿದೆ. ನಾಲ್ಕು ಪ್ರಕರಣಗಳಲ್ಲಿ ಹಂತಕರ ವಿರುದ್ಧ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ.
ಈ ಕೊಲೆ ಪ್ರಕರಣಗಳಲ್ಲಿ ತನಿಖಾ ತಂಡಕ್ಕೆ ಲಭ್ಯವಿರುವ ಸಾಕ್ಷಿಗಳು ಏಕೆ ಉಪಯೋಗಕ್ಕೆ ಬರುತ್ತಿಲ್ಲ ಎಂಬುದಕ್ಕೆ ಹಿರಿಯ ಫೊರೆನ್ಸಿಕ್ ತಜ್ಞರು ವಿವರಣೆ ನೀಡಿದ್ದಾರೆ. ಈ ಎಲ್ಲಾ ಕೊಲೆಗಳು ನಡೆದಿರುವುದು ಅವರುಗಳ ಮನೆಯ ಮುಂದಿನ ತೆರೆದ ಪ್ರದೇಶದಲ್ಲಿ, 4 ಪ್ರಕರಣಗಳಲ್ಲಿ ದಾಳಿ ಮಾಡಿರುವ ರೀತಿ ಒಂದೇಯಾಗಿದೆ. ಆದರೆ ನಾಲ್ಕು ಕೊಲೆಗಳನ್ನು ಅದೇ ಹಂತಕರು ಮಾಡಿದ್ದಾರೆ ಎನ್ನುವುದಕ್ಕೆ, ಘಟನೆ ನಡೆದ ಸ್ಥಳದಲ್ಲಿ ಯಾವುದೇ ಫೂಟ್ ಪ್ರಿಂಟ್ ಅಥವಾ ಬೇರೆ ಯಾವುದೇ ಸಾಕ್ಷಿ ದೊರೆತಿಲ್ಲ.
ಹತ್ಯೆಕೋರರು ಸಂತ್ರಸ್ತರು ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟಿಲ್ಲ, ಆದರೆ ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಅವರ ಮನೆಯ ಬಾಗಿಲನ್ನು ತಟ್ಟಿದ್ದರು, ಆದರೆ ಅಲ್ಲಿ ಯಾವುದೇ ಬೆರಳಚ್ಚು ಪತ್ತೆಯಾಗಿರಲಿಲ್ಲ.
ಮನೆಯ ಒಳಗೆ ಕೊಲೆಯಂತ ಪ್ರಕರಣಗಳು ನಡೆದಾಗ ಪೊಲೀಸರ ತನಿಖೆಗೆ ತೊಂದರೆಯಾಗುವುದಿಲ್ಲ, ಆದರೆ ಮನೆಯ ಹೊರಗಿನ ಅಂಗಳದಲ್ಲಿ ನಡೆದ ಅಪರಾಧ ಪ್ರಕರಣಗಳು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತವೆ. ಏಕೆಂದರೇ ನೆರೆ ಹೊರೆಯವರು, ದಾರಿ ಹೋಕರು ಮನೆಯ ಮುಂದಿನ ಪ್ರದೇಶದಲ್ಲಿ ತಿರುಗಾಡುವುದರಿಂದ ಆ ಸ್ಥಳದಲ್ಲಿ ಬಿದ್ದಿರುವ ಸಾಕ್ಷಿಗಳಾದ, ಕೂದಲು, ಫೂಟ್ ಪ್ರಿಂಟ್, ರಕ್ತದ ಕಲೆಗಳು ನಾಶವಾಗುವ ಸಾಧ್ಯತೆಯಿರುತ್ತದೆ.
ನಾಲ್ಕು ಪ್ರಕರಣಗಳಲ್ಲಿ ಸಂತ್ರಸ್ತರು ಯಾವುದೇ ಪ್ರತಿರೋಧ ಒಡ್ಡಿಲ್ಲ, ಹೀಗಾಗಿ ಹಂತಕರು ಪದೇ ಪದೇ ಗುಂಡು ಹಾರಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿ ನೆರವಾಗಬಹುದು, ಆದರೆ ಹಿಂದಿನ ಮೂರು ಪ್ರಕರಣಗಳಲ್ಲಿ ಸಾಕ್ಷಿ ಕಲೆ ಹಾಕಲು ಯಾವುದೇ ಸಿಸಿಟಿವಿಯಿಂದ ಸಾಧ್ಯವಾಗಿಲ್ಲ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶ್ವಾನ ದಳ ಬಳಸಲಾಗಿಲ್ಲ, ಅಪರಾಧ ನಡೆದ ಸ್ಥಳದಲ್ಲಿ ಶ್ವಾನಗಳು ವಾಸನೆಯಿಂದ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕಾಟ್ರಿಡ್ಜ್, ಸೇರಿದಂತೆ ಬಿಟ್ಟು ಹೋಗಿರುವ ಅವಶೇಷಗಳಿಂದ ಶ್ವಾನಗಳು ಹಂತಕರ ಪತ್ತೆ ಹಾಚ್ಚುವ ಸಾಧ್ಯತೆಯಿತ್ತು ಎಂದು ನಿವೃತ್ತ ಪೋರೆನ್ಸಿಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಹಂತಕರು ಮೊಬೈಲ್ ಬಳಸಿಲ್ಲ, ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಭಾನುವಾರ ವಿಶೇಷ ಸಭೆ ನಡೆಸಿ ಚರ್ಚಿಸಿದ್ದಾರೆ.ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಬಂದಿರುವ ಅಧಿಕಾರಿಗಳು, ಹತ್ಯೆ ನಡೆದ ವೇಳೆ ಹಂತಕರು ಮೊಬೈಲ್ ಫೋನ್ ಬಳಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮಂಗಳವಾರ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ. ಸರ್ಕಾರ ತನಿಖೆಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕು ಒಂದು ಒತ್ತಾಯಿಸಲಾಗುವುದು.ಈ ಸಭೆಯಲ್ಲಿ ಮೇದಾ ಪಾಟ್ಕರ್, ಜಿಗ್ನೇಶ್ ಮೇವಾನಿ, ವಕೀಲ ಪ್ರಶಾಂತ್ ಭೂಷಣ್, ತೀಸ್ತಾ ಸೆತಲ್ವಾಡ್, ನಾಗತಿ ಹಳ್ಳಿ ಚಂದ್ರ ಶೇಖರ್ ಸೇರಿದಂತೆ ಹಲವು ಮಂದಿ ಪಾಲ್ಗೋಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics