ರಾಜ್ಯ

ಬೆಂಗಳೂರು: ಅಪಹರಣಕ್ಕೀಡಾಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ, 6 ಮಂದಿಯ ಬಂಧನ

Sumana Upadhyaya
ಬೆಂಗಳೂರು: ಹತ್ತು ದಿನಗಳ ಹಿಂದೆ ಬೈಕ್ ನಲ್ಲಿ ಮನೆಯಿಂದ ಹೊರ ಹೋಗಿ ನಿಗೂಢವಾಗಿ ನಾಪತ್ತೆಯಾಗಿದ್ದ ಐಟಿ ಇಲಾಖೆ ಅಧಿಕಾರಿ ಪುತ್ರನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಕೆಂಗೇರಿ ಸಮೀಪ ದೊಡ್ಡ ಆಲದ ಬಳಿಯಿರುವ ರಾಮೋಹಳ್ಳಿ ಕೆರೆಯಲ್ಲಿ ಪೊಲೀಸರಿಗೆ ಶರತ್ ನ ಮೃತದೇಹ ಸಿಕ್ಕಿದೆ. ಇಂದು ಬೆಳಗ್ಗೆ ಸ್ಥಳೀಯರು ಕೆರೆಯಲ್ಲಿ ಮೃತದೇಹ ಸಿಕ್ಕಿರುವುದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಪುತ್ರ 19 ವರ್ಷದ ಶರತ್ ಸೆಪ್ಟೆಂಬರ್ 12ರಂದು ನಿಗೂಢವಾಗಿ ಕಣ್ಮರೆಯಾಗಿದ್ದ. ಶರತ್ ನ ಪೋಷಕರು ಮಗನಿಗೆ ಹೊಸ ಬೈಕ್ ಕೊಡಿಸಿದ್ದರು. ಅದನ್ನು ಸ್ನೇಹಿತರಿಗೆ ತೋರಿಸಿ ಸ್ವೀಟ್ ಕೊಟ್ಟು ಬರುತ್ತೇನೆಂದು ಕಳೆದ 12ರಂದು ಸಾಯಂಕಾಲ 5.30ರ ಸುಮಾರಿಗೆ ಮನೆಯಿಂದ ಶರತ್ ಹೊರಟಿದ್ದ. ಆದರೆ ಅಂದು ವಾಪಾಸಾಗಿರಲಿಲ್ಲ.
ಮರುದಿನ ಶರತ್ ತಂದೆಯ ವಾಟ್ಸಾಪ್ ನಂಬರಿಗೆ ವಿಡಿಯೊ ಮೆಸೇಜ್ ಬಂದಿತ್ತು. ಅದರಲ್ಲಿ ಶರತ್ ತನ್ನನ್ನು ಯಾರೊ ಅಪಹರಿಸಿದ್ದು, 50 ಲಕ್ಷ ರೂಪಾಯಿ ನೀಡಿ ಬಿಡಿಸಿಕೊಂಡು ಹೋಗುವಂತೆಯೂ ಮತ್ತು ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಲಾಗಿತ್ತು. 
ವಿಡಿಯೊ ಮೆಸೇಜ್ ನೋಡಿದ ಶರತ್ ತಂದೆ ನಿರಂಜನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಬಿ ಸೇರಿ ಪೊಲೀಸರ ಆರು ತಂಡಗಳನ್ನು ರಚಿಸಲಾಗಿತ್ತು. ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಅಷ್ಟರ ಮಧ್ಯೆ ಶರತ್ ನ ಸಾವು ಸಂಭವಿಸಿದೆ. 
ಬೆಂಗಳೂರಿನ ಹೆಚ್ ಎಂಟಿ ಭವನದಲ್ಲಿರುವ ಆದಾಯ ತೆರಿಗೆ ಇಲಾಖೆಯಲ್ಲಿ ನಿರಂಜನ್ ಅಧಿಕಾರಿಯಾಗಿದ್ದಾರೆ. 
SCROLL FOR NEXT