ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಉಡಗಿ ಜಿಲ್ಲೆಯ 8ನೇ ತರಗತಿ ವಿದ್ಯಾರ್ಥಿನಿ ಪೂಜಾ ನೀಲಕಂಠ ಹಠಬಿಡದೆ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾಳೆ. ಆರಂಭದಲ್ಲಿ ಶೌಚಾಲಯ ನಿರ್ಮಿಸಲು ಆಕೆಯ ತಂದೆ ಒಪ್ಪಿರಲಿಲ್ಲ. ಅದಕ್ಕೆ ಈ ಬಾಲಕಿ ಎರಡು ದಿನ ಉಪವಾಸ ಕುಳಿತು ಪೋಷಕರ ಮನವೊಲಿಸಿ ತನ್ನ ಕಾರ್ಯ ಸಾಧಿಸಿಕೊಂಡಿದ್ದಾಳೆ.
ಕಲಬುರಗಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಸರ್ಕಾರಿ ಶಾಲೆಗಳಲ್ಲಿ ರೇಡಿಯೊ ಫೋನ್ ಇನ್ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಇವರು ಸಾರ್ವಜನಿಕ ಸಲಹೆಯ ಉಸ್ತುವಾರಿ ಆಯುಕ್ತೆ ಕೂಡ ಆಗಿದ್ದಾರೆ. ಇವರು ಮೊನ್ನೆ 22ರಂದು ಕಲಬುರಗಿಯಲ್ಲಿ ಸ್ವಚ್ಛತೆ ಕುರಿತು ರೇಡಿಯೊ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದರು. ಅದರಲ್ಲಿ ಅವರಿಗೆ 11 ದೂರವಾಣಿ ಕರೆಗಳು ಬಂದಿದ್ದವು.
ಕಾರ್ಯಕ್ರಮದಲ್ಲಿ ಉಡಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪೂಜಾ ನೀಲಕಂಠ, ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಪೋಷಕರ ಮೇಲೆ ಒತ್ತಡ ಹೇರಲು ಉಪವಾಸ ಮಾಡುತ್ತಿರುವುದಾಗಿ ಹೇಳಿದ್ದಳು. ಅದನ್ನು ಕೇಳಿದ ಕೊರ್ಲಪಾಟಿ, ಉಪವಾಸ ಬಿಡುವಂತೆಯೂ ಆಕೆಯ ಪೋಷಕರ ಮನವೊಲಿಸಿ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಅದರಂತೆ ಪೂಜಾ ಪೋಷಕರಲ್ಲಿ ಮಾತನಾಡಿ ಶೌಚಾಲಯ ನಿರ್ಮಿಸಲು ಅವರು ಕೂಡ ಒಪ್ಪಿಕೊಂಡಿದ್ದಾರೆ. ಆದರೂ ಕೂಡ ಶೌಚಾಲಯ ನಿರ್ಮಾಣ ಕೆಲಸ ಪ್ರಾರಂಭವಾಗುವವರೆಗೂ ತನ್ನ ಉಪವಾಸ ಮುಂದುವರಿಸುವುದಾಗಿ ಪೂಜಾ ಕೂತಿದ್ದಳು.
ಆದರೆ ನಿನ್ನೆ ಅವಳ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುಂಡಿ ಅಗೆದಿದ್ದರು. ಪಿಡಿಒ ಅಧಿಕಾರಿ ಉಡಗಿ ಓಂಕಾರ ಅವರು ಸೇಡಂನಿಂದ ಶೌಚಾಲಯ ನಿರ್ಮಾಣಕ್ಕೆ ವಸ್ತುಗಳನ್ನು ತಂದಿದ್ದರು. ತಾನು ಕೊಪ್ಪಳ ಜಿಲ್ಲೆಯ ದಾನಾಪುರ್ ಗ್ರಾಮದ 10ನೇ ತರಗತಿ ವಿದ್ಯಾರ್ಥಿನಿ ಮಲ್ಲಮ್ಮ ಎಂಬಾಕೆಯಿಂದ ಪ್ರೇರೇಪಿತಗೊಂಡು ಶೌಚಾಲಯ ನಿರ್ಮಿಸಲು ಪೋಷಕರಿಗೆ ಒತ್ತಡ ಹೇರಿರುವುದಾಗಿ ಪೂಜಾ ಹೇಳುತ್ತಾಳೆ. ಪೂಜಾಳ ತಂದೆ ನೀಲಕಂಠ ಆಟೋ ಚಾಲಕ.
ನಾನು ಈ ಹಿಂದೆ ಹಲವು ಬಾರಿ ಶೌಚಾಲಯ ನಿರ್ಮಿಸುವಂತೆ ಒತ್ತಾಯ ಮಾಡಿದ್ದರೂ ಕೂಡ ಪೋಷಕರು ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಹೀಗಾಗಿ ನನಗೆ ಉಪವಾಸ ಕುಳಿತುಕೊಳ್ಳುವುದೊಂದೇ ದಾರಿಯಾಗಿತ್ತು ಎನ್ನುತ್ತಾಳೆ.