ಕಾವೇರಿ ವಿವಾದ: ತಮಿಳುನಾಡಿಗೆ ಕಡಿಮೆ ಪ್ರಮಾಣದ ನೀರು- ಸುಪ್ರೀಂ ಬಳಿ ರಾಜ್ಯ ಸರ್ಕಾರ ಮನವಿ?
ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಸತತವಾಗಿ ಬರ ಇರುವುದರಿಂದ ತಮಿಳುನಾಡಿಗೆ ಕಡಿಮೆ ಪ್ರಮಾಣದ ನೀರು ಬಿಡುವಂತೆ ಸಮ್ಮತಿ ನೀಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಜಲಸಂಪನ್ಮೂಲ...
ನವದೆಹಲಿ: ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಸತತವಾಗಿ ಬರ ಇರುವುದರಿಂದ ತಮಿಳುನಾಡಿಗೆ ಕಡಿಮೆ ಪ್ರಮಾಣದ ನೀರು ಬಿಡುವಂತೆ ಸಮ್ಮತಿ ನೀಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಸೋಮವಾರ ಹೇಳಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಕ್ಷ್ಮ ವಿಷಯಗಳ ಬಗ್ಗೆ ರಾಜ್ಯದ ಪರ ಮುಖ್ಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಮತ್ತು ರಾಜ್ಯದ ಕಾನೂನು ತಂಡದ ಸದಸ್ಯರು ಹಾಗೂ ತಾಂತ್ರಿಕ ತಂಡದ ಸದಸ್ಯರೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಸಭೆ ನಡೆಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ವಕೀಲರು ಮತ್ತು ಎಂಜಿನಿಯರ್ ಗಳ ಜೊತೆಗೆ ಚರ್ಚೆ ನಡೆಸಿದ ಪಾಟೀಲ್, ನಾರಿಮನ್ ಅವರೊಂದಿಗೆ ಚರ್ಚಿಸಬೇಕಾದ ಅಂಶಗಳ ಬಗ್ಗೆ ಮತ್ತು ಜಲ ವಿವಾದಗಳಲ್ಲಿನ ರಾಜ್ಯ ಕಾನೂನು ಹೋರಾಟಗಳ ಮುಂದಿನ ಹೆಜ್ಜೆ ಬಗ್ಗೆ ಸಮಾಲೋಚನೆ ನಡೆಸಿದರು.
ಕಾವೇರಿ ನ್ಯಾಯಾಧೀಕರಣದ ಆದೇಶದಂತೆಯೇ ತಮಿಳುನಾಡು ರಾಜ್ಯಕ್ಕೆ ವರ್ಷವೊಂದರಲ್ಲಿ 192 ಟಿಎಂಸಿ ನೀರು ಬಿಡಬೇಕು. ರಾಜ್ಯದಲ್ಲಿ ನಿರಂತರ ಬರ ಇರುವ ಕಾರಣ ಮಳೆ ಕೊರತೆಯಾಗುತ್ತಿದೆ. ಹಾಗಾಗಿ ನ್ಯಾಯಾಧೀಕರಣದ ಆದೇಶದಂತೆ ಪಕ್ಕದ ರಾಜ್ಯಕ್ಕೆ ನೀರು ಹರಿಸಲು ಆಗುತ್ತಿಲ್ಲ. ವಾಸ್ತವವಾಗಿ ಇದು ಕಾರ್ಯಸಾಧುವೂ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ 100 ಟಿಎಂಸಿಯಿಂದ 102 ಟಿಎಂಸಿಯಷ್ಟು ಮಾತ್ರ ನೀಡಬಹುದು. ಇದಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಗೆ ಲಿಖಿತ ಮನವಿ ಸಲ್ಲಿಸುವ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾಟೀಲ್, ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡನೆ ಮುಕ್ತಾಯಗೊಂಡಿದೆ. ನಾವು 9 ಅಂಶಗಳು ಪ್ರಧಾನವಾಗಿ ಅಡಕವಾಗಿರುವ ಮಾಸ್ಟರ್ ನೋಟ್ ವೊಂದನ್ನು ಸುಪ್ರೀಂಕೋರ್ಟ್ ಸಲ್ಲಿಸಲಿದ್ದೇವೆ. ಈ ಬಗ್ಗೆ ನಾವು ಅರ್ಥಪೂರ್ಣ ಚರ್ಚೆ ನಡೆಸಿದ್ದೇವೆಂದು ಹೇಳಿದ್ದಾರೆ.
ಮಳೆ ಕೊರೆತ ರಾಜ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ತಮಿಳುನಾಡಿಗೆ ವಾರ್ಷಿಕವಾಗಿ ಬಿಡಬೇಕಿರುವ ನೀರನ್ನು 192 ಟಿಎಂಸಿಯಿಂದ 100-102 ಟಿಎಂಸಿಗೆ ಇಳಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯದಲ್ಲಿ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ನೀರಿನ ಕೊರತೆಯಿದ್ದು, ಸುಪ್ರೀಂಕೋರ್ಟ್ ಅಂತಿಮ ಆದೇಶ ರಾಜ್ಯದಜ ಪರವಾಗಿರಲಿದೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೇವೆಂದು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.