ರಾಜ್ಯ

ಶರತ್ ಕೊಲೆ ಪ್ರಕರಣ: ಮತ್ತೊಬ್ಬ ಶಂಕಿತನ ಬಂಧನ

Manjula VN

ಬೆಂಗಳೂರು: ಐಟಿ ಅಧಿಕಾರಿ ನಿರಂಜನ್ ಕುಮಾರ್ ಅವರ ಪುತ್ರ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ಶಾಂತಕುಮಾರ್ ಬಂಧನಕ ಆರೋಪಿ ಎಂದು ತಿಳುದುಬಂದಿದೆ. ಜ್ಞಾನಭಾರತಿಯ ಹಗ್ಗನಪಾಳ್ಯದ ಶಾಂತಕುಮಾರ್ ನನ್ನು ಮೆಜೆಸ್ಟಿಕ್ ಬಳಿ ಭಾನುವಾರ ತಡರಾತ್ರಿ ಬಂಧನಕ್ಕೊಳಪಡಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. 

ಪ್ರಕರಣ ಸಂಬಂಧ ಈ ಹಿಂದೆ ಬಂಧನಕ್ಕೊಳಪಗಾಗಿರುವ ವಿನೋದ್, ವಿಶಾಲ್, ಕರಣ್ ಪೈ, ವಿನಯ್ ಪ್ರಸಾದ್ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಬಾಯ್ಬಿಚ್ಚಿದ್ದರು. ಶರತ್ ನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಶಾಂತಕುಮಾರ್ ಹತ್ಯೆ ಮಾಡಿದ್ದ ಎಂದು ಹೇಳಿಕೊಂಡಿದ್ದರು. 

ಹತ್ಯೆ ಬಳಿದ ಶಾಂತಕುಮಾರ್ ತಲೆಮರೆಸಿಕೊಂಡಿದ್ದ. ಹತ್ಯೆಯಾದ ಸ್ಥಳದಲ್ಲಿ ಶಾಂತಕುಮಾರ್ ಉಬರ್ ಕ್ಯಾಬ್ ಪತ್ತೆಯಾಗಿತ್ತು. ಕಾರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. 

ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಪುತ್ರ 19 ವರ್ಷದ ಶರತ್ ಸೆಪ್ಟೆಂಬರ್ 12ರಂದು ನಿಗೂಢವಾಗಿ ಕಣ್ಮರೆಯಾಗಿದ್ದ. ಶರತ್ ನ ಪೋಷಕರು ಮಗನಿಗೆ ಹೊಸ ಬೈಕ್ ಕೊಡಿಸಿದ್ದರು. ಅದನ್ನು ಸ್ನೇಹಿತರಿಗೆ ತೋರಿಸಿ ಸ್ವೀಟ್ ಕೊಟ್ಟು ಬರುತ್ತೇನೆಂದು ಕಳೆದ 12ರಂದು ಸಾಯಂಕಾಲ 5.30ರ ಸುಮಾರಿಗೆ ಮನೆಯಿಂದ ಶರತ್ ಹೊರಟಿದ್ದ. ಆದರೆ ಅಂದು ವಾಪಾಸಾಗಿರಲಿಲ್ಲ.

ಮರುದಿನ ಶರತ್ ತಂದೆಯ ವಾಟ್ಸಾಪ್ ನಂಬರಿಗೆ ವಿಡಿಯೊ ಮೆಸೇಜ್ ಬಂದಿತ್ತು. ಅದರಲ್ಲಿ ಶರತ್ ತನ್ನನ್ನು ಯಾರೊ ಅಪಹರಿಸಿದ್ದು, 50 ಲಕ್ಷ ರೂಪಾಯಿ ನೀಡಿ ಬಿಡಿಸಿಕೊಂಡು ಹೋಗುವಂತೆಯೂ ಮತ್ತು ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಲಾಗಿತ್ತು. 

ವಿಡಿಯೊ ಮೆಸೇಜ್ ನೋಡಿದ ಶರತ್ ತಂದೆ ನಿರಂಜನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಬಿ ಸೇರಿ ಪೊಲೀಸರ ಆರು ತಂಡಗಳನ್ನು ರಚಿಸಲಾಗಿತ್ತು. ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಅಷ್ಟರ ಮಧ್ಯೆಯೇ ಶರತ್ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿತ್ತು.  
SCROLL FOR NEXT