ಮುಂದಿನ ಅಧಿವೇಶನದಲ್ಲಿ ಮೌಢ್ಯ ನಿಷೇಧ ಕಾಯ್ದೆ
ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ನಿರ್ದೇಶಿಸಿದ್ದು, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಣೆಯಲ್ಲಿರುವ ಮಡೆ ಸ್ನಾನ ನಿಷೇಧವಾಗುವ ಸಾಧ್ಯತೆಗಳಿವೆ.
ಮೌಢ್ಯ ನಿಷೇಧ ಕಾಯ್ದೆ ಜಾರಿಯ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದ್ದು, ಮೌಢ್ಯ ನಿಷೇಧ ಕಾಯ್ದೆ-2016 ರನ್ನು ಜಾರಿಗೆ ತರಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿರುವ ಮೌಢ್ಯ ನಿಷೇಧದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮೌಢ್ಯ ನಿಷೇಧ ಕಾಯ್ದೆಯನ್ನು ಸಿದ್ಧಪಡಿಸಲಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ನೇತೃತ್ವದ ಸ್ಕ್ರೀನಿಂಗ್ ಸಮಿತಿ ಮಸೂದೆಯ ಕರಡು ಪ್ರತಿಗೆ ಅನುಮೋದನೆ ನೀಡಿದೆ.
ಈ ಹಿಂದಿನ ಮೌಢ್ಯ ನಿಷೇಧ ಕಾಯ್ದೆಯ ಹಲವು ಅಂಶಗಳಿಗೆ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿಯೆ ವಿರೋಧ ವ್ಯಕ್ತವಾಗಿದ್ದರ ಕಾರಣ ಸ್ಕ್ರೀನಿಂಗ್ ಕಮಿಟಿಗೆ ಪರಿಶೀಲನೆಗೆ ಕಳಿಸಲಾಗಿತ್ತು. ನರಬಲಿ, ಮಡೆ ಸ್ನಾನ ಸೇರಿದಂತೆ ಅತ್ಯಂತ ಘೋರ ಆಚರಣೆಗಳಿಗೆ ಕಡಿವಾಣ ಹಾಕಲು ಮೌಢ್ಯ ನಿಷೆಧ ಕಾಯ್ದೆಯನ್ನು ರೂಪಿಸಲಾಗಿದೆ.
ತಿದ್ದುಪಡಿ ಮಸೂದೆ, ಜ್ಯೋತಿಷ್ಯ, ವಾಸ್ತು ಸೇರಿದಂತೆ ಜನತೆಯ ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಮಾಡುವುದಿಲ್ಲ, ಸರ್ಕಾರ ಜನತೆಯ ನಂಬಿಕೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವ ಜಯಚಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos