ಪುನೀತ ಯಾತ್ರೆಗೆ ಸಿಎಂ ಚಾಲನೆ
ಬೆಂಗಳೂರು: ದಸರಾ ಅಂಗವಾಗಿ ಸಿಎಂ ಸಿದ್ದರಾಮಯ್ಯ ಎಲ್ಲಾ ಧರ್ಮದವರಿಗಾಗಿ ಪುನೀತ ಯಾತ್ರೆ ಎಂಬ ಪ್ರವಾಸ ಯೋಜನೆಗೆ ಚಾಲನೆ ನೀಡಿದರು.
ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಈ ಯೋಜನೆ ಜಾರಿಗೊಳಿಸಿದ್ದು, ಶೇ. 25ರ ದರದಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಪುನೀತ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪುನೀತ ಯಾತ್ರೆ ಯೋಜನೆಯಡಿ ಪ್ರತಿವರ್ಷ 1.38ಲಕ್ಷ ಜನರನ್ನು ತೀರ್ಥಕ್ಷೇತ್ರಗಳಿಗೆ ಪ್ರವಾಸ ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಶೇ 25ರಷ್ಟು ರಿಯಾಯಿತಿ ದರದಲ್ಲಿ ಎಲ್ಲಾ ಧರ್ಮದ ಪ್ರವಾಸಿಗರನ್ನು ಕರೆದೊಯ್ಯುಲಾಗುವುದು ಎಂದರು.
ಮೊದಲ ಹಂತದಲ್ಲಿ 9 ಮಾರ್ಗಗಳಲ್ಲಿ ಪ್ರವಾಸ ಆರಂಭಿಸಲಾಗಿದೆ. ದಕ್ಷಿಣ ಕನ್ನಡದ ಪವಿತ್ರ ಸ್ಥಳಗಳು, ಹೊಯ್ಸಳ ಮತ್ತು ಗೊಮ್ಮಟೇಶ್ವರ ಯಾತ್ರೆ, ಉತ್ತರ ಕರ್ನಾಟಕ ಪ್ರವಾಸ, ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳು, ತಿರುಪತಿ ದರ್ಶನ, ತಿರುಪತಿ– ಕಾಳಹಸ್ತಿ ಭೇಟಿ, ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳು, ಮಂತ್ರಾಲಯ ಮತ್ತು ಶಿರಡಿ ಟ್ರಿಪ್ ಆರಂಭಿಸಲಾಗಿದೆ ಎಂದು ವಿವರಿಸಿದರು.
2ನೇ ಹಂತದ ಪ್ರವಾಸ ಅ.15ರಿಂದ ಆರಂಭವಾಗಲಿದೆ. ಈ ಪ್ಯಾಕೇಜ್ ಅಡಿಯಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಸ್ಥಳಗಳಾದ ಪ್ರಸಿದ್ಧ ಮಸೀದಿಗಳು, ದತ್ತಾತ್ರೇಯ ಚಂದ್ರಲಂಬ, ಸನ್ನತಿ ರಾಘವೇಂದ್ರ, ಸವದತ್ತಿ ಯಲ್ಲಮ್ಮ, ದರ್ಶನ ಮತ್ತು ಬಸವೇಶ್ವರರ ಪವಿತ್ರ ಸ್ಥಳಗಳು, ಚಿಕ್ಕ ತಿರುಪತಿ, ಕೈವಾರ, ಏಳು ಮಲೆ ಮತ್ತು ನಂಜುಂಡೇಶ್ವರ ದರ್ಶನ, ಗೋಕರಣ್, ಶಿರಸಿ ಮಾರಿಕಾಂಬ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕೆ.ಎಸ್.ಟಿ.ಡಿ.ಸಿಯ 24 ಎಸಿ ಡಿಲಕ್ಸ್ ಬಸ್‌ಗಳನ್ನು ಈ ಪ್ರವಾಸಕ್ಕೆ ನಿಯೋಜಿಸಲಾಗಿದೆ. ಪ್ರವಾಸಿಗರಿಗೆ ವಾಸ್ತವ್ಯ ಮತ್ತು ಮಾರ್ಗದರ್ಶಕರ ವ್ಯವಸ್ಥೆ ಇರಲಿದೆ. ಊಟದ ವೆಚ್ಚವನ್ನು ಮಾತ್ರ ಪ್ರವಾಸಿಗರೇ ಭರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆಸಕ್ತರು ಕೆ.ಎಸ್.ಟಿ.ಡಿ.ಸಿ ವೆಬ್‌ಸೈಟ್‌ನಲ್ಲಿ (www.kstdc.co) ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos