ಬೆಂಗಳೂರು: ಇಸ್ಕಾನ್ ದೇವಾಲಯ ಅರ್ಚಕ ಬರ್ಬರ ಹತ್ಯೆ
ಬೆಂಗಳೂರು: ಇಸ್ಕಾನ್ ದೇವಾಲಯದ ಅರ್ಚಕನೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ.
ಇಸ್ಕಾನ್ ದೇವಾಲಯದ ಅರ್ಚಕ ಸಂಜಯ್ ಸತೀಶ್ ಹತ್ಯೆಯಾದ ದುರ್ದೈವಿಯಾಗಿದ್ದು ಇವರು ಬೆತ್ತಲ್, ನಗರದ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು.
ಹದಿನೈದು ದಿನಗಳಿಗೊಮ್ಮೆ ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಳ್ಳುತ್ತಿದ್ದ ಸಂಜಯ್ ಕಳೆದ ಬುಧವಾರ ತಾವು ಇಸ್ಕಾನ್ ದೇವಾಲಯದ ಪೂಜೆ ಮುಗಿಸಿ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ. ಆ ವೇಳೆ ಅಲ್ಲಿಗಾಗಮಿಸಿದ್ದ ದುಷ್ಕರ್ಮಿಗಳು ಅರ್ಚಕ ಸಂಜಯ್ ಕೈ ಕಾಲುಗಳನ್ನು ಕಟ್ಟಿ ಹಾಕಿ ಹತ್ಯೆ ಮಾಡಿದ್ದಾರೆ.
ಇದಾಗಿ ಒಂದು ವಾರವಾಗಿದ್ದು ಇದುವರೆಗೂ ನೆರೆಯವರಿಗಾಗಲೀ, ದೇವಾಲಯದ ಸಹೋದ್ಯೋಗಿಗಳಿಗಾಗಲೀ ವಿಷಯ ತಿಳಿದಿರಲಿಲ್ಲ. ಆದರೆ ನಿನ್ನೆ ಬುಧವಾರ ಸಂಜಯ್ ವಾಸವದ್ದ ಫ್ಲಾಟ್‍ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಲಾಗಿ ಅರ್ಚಕ ಸಂಜಯ್ ಹತ್ಯೆಯಾಗಿರುವುದು ತಿಳಿದಿದೆ.
ಬೆರಳಚ್ಚು ತಜ್ಞರನ್ನು ಕರೆಸಿ ಪೋಲೀಸರು ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸಂಜಯ್ ಸತೀಶ್ ಹಲವಾರು ವರ್ಷಗಳಿಂದಲೂ ಒಬ್ಬರೇ ವಾಸವಾಗಿದ್ದರು. ಅವರ ಕುಟುಂಬ, ಹಿನ್ನೆಲೆಗಳ ಬಗೆಗೆ ತಮಗೆ ತಿಳಿದಿಲ್ಲವೆಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.
ಅರ್ಚಕನ ಹತ್ಯೆಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಕೆ.ಆರ್ ಪುರಂ ಪೋಲೀಸರು ತಿಳಿಸಿದ್ದು ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.