ಬೆಂಗಳೂರು: ಯುವತಿಯರ ಸೋಗಿನಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು, ಡೇಟಿಂಗ್‌ಗೆ ಬರುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಬಿಎ ಪದವೀಧರ ಸಾಗರ್ ರಾವ್ (25) ಎಂಬಾತನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈಟ್‌ಫೀಲ್ಡ್ ಬಳಿಯ ವಿನಾಯಕ ಲೇಔಟ್‌ನ ನಿವಾಸಿಯಾದ ಆರೋಪಿ, ಪದವಿ ಮುಗಿದ ಬಳಿಕ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಅವಾಗಲೇ ‘ಫ್ರೀ ಡೇಟಿಂಗ್ ಡಾಟ್ ಕಾಮ್’ ಜಾಲತಾಣ ಹಾಗೂ ‘ಫ್ರೀ ಡೇಟಿಂಗ್’ ಆ್ಯಪ್‌ನಲ್ಲಿ ಯುವತಿಯರ ಹೆಸರಿನಲ್ಲಿ ಖಾತೆ ತೆರೆದಿದ್ದ ಆತ, ಅದರ ಮೂಲಕವೇ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
2017ರಲ್ಲಿ ಶಿಲ್ಪ ಎಂಬ ಹೆಸರಲ್ಲಿ ಬೆಂಗಳೂರಿನ ನಿವಾಸಿಯೊಬ್ಬರ ಮಗನನ್ನು ಆ್ಯಪ್ ಮೂಲಕ ಸಂಪರ್ಕಿಸಿದ್ದ ಆರೋಪಿ, ಆತನಿಂದ ರು.71,000 ಪಡೆದುಕೊಂಡಿದ್ದ. ಅದು ತಿಳಿಯುತ್ತಿದ್ದ ನಿವಾಸಿಯು 2017ರ ಅಕ್ಟೋಬರ್ 10ರಂದು ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಿದ್ದಾರೆ.
‘ಶಿಲ್ಪಾ, ಸೋನಿಯಾ, ಮನೀಷಾ ಜೈನ್ ಹೆಸರಿನಲ್ಲಿ ಆರೋಪಿ ಖಾತೆ ಹೊಂದಿದ್ದ. ಆ ಖಾತೆಗಳಿಗೆ ಹಲವು ಯುವಕರು ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ಆರೋಪಿಯು ಪ್ರತಿಕ್ರಿಯಿಸುತ್ತಿದ್ದ. ಯುವಕರ ಮೊಬೈಲ್ ಸಂಖ್ಯೆ ಪಡೆದುಕೊಂಡು ನಿರಂತರವಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಸಹ ಕಳುಹಿಸುತ್ತಿದ್ದ. ಡೇಟಿಂಗ್‌ಗೆ ಬರುವುದಾಗಿಯೂ ಹೇಳಿ ಯುವಕರನ್ನು ನಂಬಿಸುತ್ತಿದ್ದ.
ನೀವು ಹಣ ಕೊಟ್ಟರೆ ಡೇಟಿಂಗ್‌ಗೆ ಬರುತ್ತೇನೆ’ ಎಂದು ಯುವಕರಿಗೆ ಸಂದೇಶ ಕಳುಹಿಸುತ್ತಿದ್ದ. ಅದನ್ನು ನಂಬುತ್ತಿದ್ದ ಯುವಕರು, ಆತನ ಬ್ಯಾಂಕ್ ಖಾತೆ ಹಣ ಜಮೆ ಮಾಡುತ್ತಿದ್ದರು. ಆ ಬಳಿಕ ಆರೋಪಿ, ಆ ಯುವಕರೊಂದಿಗೆ ಮಾತನಾಡುವುದನ್ನೇ ನಿಲ್ಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಆರೋಪಿ 12 ಮಂದಿಗೆ ಹಣ ಕೇಳಿದ್ದಾನೆ ಆದರೆ ಅದರಲ್ಲಿ ಇಬ್ಬರು ಮಾತ್ರ ಹಣ ನೀಡಿ ಮೋಸ ಹೋಗಿದ್ದಾರೆ. ಹುಬ್ಬಳ್ಳಿಯ ನಿವಾಸಿಯೊಬ್ಬರಿಗೆ 10 ಸಾವಿರ ರು ವಂಚಿಸಿದ್ದಾನೆ.
ಕಾಲೇಜು ಸಹಪಾಠಿ ಯುವತಿಯೊಬ್ಬರನ್ನು ಆರೋಪಿಯು ಪ್ರೀತಿಸುತ್ತಿದ್ದ. ಯುವಕರನ್ನು ವಂಚಿಸಿ ಗಳಿಸಿದ್ದ ಹಣದಲ್ಲೇ ಆತ, ಪ್ರೇಯಸಿಗೆ ಉಡುಗೊರೆಗಳನ್ನು ನೀಡಲು ಈ ರೀತಿ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos